ಪ್ರಗತಿವಾಹಿನಿ ಸುದ್ದಿ, ದುಬೈ -ದುಬೈ ಯುಎಇನ ಕನ್ನಡ ಮಿತ್ರರು ಮತ್ತು ಬಿಲ್ವ ಇಂಡಿಯನ್ ಸ್ಕೂಲ್ ಇವುಗಳ ಸಹಯೋಗದಲ್ಲಿ ಜರುಗಿದ ೬ನೇ ವರ್ಷದ ’ಕನ್ನಡ ಪಾಠ ಶಾಲೆ’ ಸಮಾರಂಭವನ್ನು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯುವರು ಉದ್ಘಾಟಿಸಿದರು.
ಅವರು ಮಾತನಾಡುತ್ತ ಇಂದು ದುಬೈನಲ್ಲಿ ಉದ್ಯೋಗಕ್ಕಾಗಿ ಅನಿವಾಸಿ ಭಾರತೀಯರು ಬಹು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅದರಲ್ಲೂ ಕನ್ನಡಿಗರು ವಿವಿಧ ವೃತ್ತಿಗಳಲ್ಲಿ ತೊಡಗಿದ್ದಾರೆ. ದೂರ ಪ್ರದೇಶದಲ್ಲಿದ್ದರೂ ಕನ್ನಡ ಪ್ರೀತಿಯನ್ನು ಉಳಿಸಿಕೊಂಡಿರುವುದು ಅಭಿನಂದನೀಯ. ನಾವು ಎಲ್ಲೇ ಇರಲಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವುದು ಕನ್ನಡಿಗರ ಕರ್ತವ್ಯ. ಈ ದಿಸೆಯಲ್ಲಿ ದುಬೈನಲ್ಲಿ ಕನ್ನಡ ಪಾಠ ಶಾಲೆಯನ್ನು ಪ್ರಾರಂಭಿಸುವ ಮೂಲಕ ಕನ್ನಡವನ್ನು ಕಲಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಕ್ಕಳಿಗೆ ಇಲ್ಲಿ ಕನ್ನಡ ಭಾಷೆಯ ಜ್ಞಾನದೊಂದಿಗೆ ಅಕ್ಷರಾಭ್ಯಾಸವನ್ನು ಕಲಿಸುತ್ತಿರುವುದಕ್ಕೆ ಸಮಸ್ತ ಕನ್ನಡಿಗರು ಹೆಮ್ಮೆಪಡಬೇಕು. ಸಾಗರದಾಚೆ ಕನ್ನಡವನ್ನು ಬೆಳೆಸುತ್ತಿರುವ ಕನ್ನಡ ಮಿತ್ರರ ಸಂಘದವರಿಗೆ ನೂರು ಅಭಿನಂದನೆಗಳು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷರಾದ ಪ್ರವೀಣ ಶೆಟ್ಟಿ, ಫ್ರೆಂಡ್ಸ್ ಆಫ್ ಇಂಡಿಯಾದ ನಿರ್ವಾಹಕರಾದ ಮೋಹನ್, ಜೆಎಸ್‌ಎಸ್ ಶಾಲೆಗಳ ಮುಖ್ಯಸ್ಥರಾದ ಡಾ.ಶಿವಕುಮಾರ್, ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಹರೇ ಸರ್ವೋತ್ತಮ ಶೆಟ್ಟಿ, ಬಿಲ್ವ ಸ್ಕೂಲ್ ನಿರ್ದೇಶಕರಾದ ದೀಪೇಶ್ ಹಾಗೂ ಕನ್ನಡ ಪಾಠ ಶಾಲೆಯ ಮುಖ್ಯ ಸಂಚಾಲಕರಾದ ಶಶಿಧರ್ ನಾಗರಾಜಪ್ಪ ಉಪಸ್ಥಿತರಿದ್ದರು. ಈ ವರ್ಷ ೨೪೦ ಮಕ್ಕಳ ಕನ್ನಡ ಪಾಠಶಾಲೆ ಆರಂಭವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ