Kannada NewsKarnataka NewsLatest

ಬೆಳಗಾವಿ ದುರಸ್ತಿಯಲ್ಲಿದೆ… ನಿಧಾನ ಸಾಗಿರಿ…

ಎಂ.ಕೆ.ಹೆಗಡೆ, ಬೆಳಗಾವಿ – ಸಾಕಪ್ಪ ಈ ಸ್ಮಾರ್ಟ್ ಸಿಟಿ ಎಂದು ಬೆಳಗಾವಿಯ ಜನ ಪರಿತಪಿಸುವಂತಾಗಿದೆ. ಸುಮಾರು ನಾಲ್ಕೂವರೆ ವರ್ಷದ ಹಿಂದೆ ಶುರುವಾದ ಸ್ಮಾರ್ಟ್ ಸಿಟಿ ಕೆಲಸ ಬೆಳಗಾವಿ ಜನರನ್ನು ಹೈರಾಣಾಗಿಸಿದೆ. ಬೆಳಗಾವಿ ಸ್ಮಾರ್ಟ್ ಆಗುತ್ತಲ್ಲಾ ಎಂದು ಸಹಿಸಿಕೊಂಡಿದ್ದವರು ಈಗ ಸಾಕಪ್ಪ ಸ್ಮಾರ್ಟ್… ಮೊದಲಿನಂತಿದ್ದರೆ ಸಾಕಿತ್ತು ಎನ್ನುವಂತಾಗಿದೆ.

ಬೆಳಗಾವಿಯ ಯಾವ ಪ್ರದೇಶಕ್ಕೆ ಹೋದರೂ, ಯಾಕಾದರೂ ಹೊರಗಡೆ ಬಂದೆನಪ್ಪ ಎನ್ನುತ್ತ ಮರಳುವಂತಾಗಿದೆ. ಎಲ್ಲಿ ನೋಡಿದರೂ ರಸ್ತೆಗಳನ್ನು ಅಗೆಯಲಾಗಿದೆ. ಎಲ್ಲಿ ನೋಡಿದರೂ ಗಟಾರ. ಎಲ್ಲಿ ನೋಡಿದರೂ ಡೇಂಜರ್ ಡೇಂಜರ್ ಡೇಂಜರ್. ಸ್ವಲ್ಪ ನಿರ್ಲಕ್ಷಿಸಿದರೂ ಯಾವುದಾದರೂ ಹೊಂಡಕ್ಕೆ ಬೀಳುವುದು ಗ್ಯಾರಂಟಿ. ಇದು ಸ್ಮಾರ್ಟ್ ಸಿಟಿ ಯೋಜನೆ, ಜೊತೆಗೆ ಗ್ಯಾಸ್ ಪೈಪ್ ಲೈನ್ ಯೋಜನೆಯ ಅವ್ಯವಸ್ಥೆ.

ಗ್ಯಾಸ್ ಪೈಪ್ ಲೈನ್ ಕಾಮಗಾರಿಗಾಗಿ ಎಲ್ಲೆಡೆ ಕಾಲುವೆ ತೋಡಲಾಗುತ್ತಿದೆ. ತೋಡಿದ ಕಾಲುವೆಯನ್ನು ಸಮರ್ಪಕವಾಗಿ ಮುಚ್ಚುವ ಕೆಲಸ ಆಗುತ್ತಿಲ್ಲ. ಎಲ್ಲರ ಮನೆಗಳ ಮುಂದೆ ಕಾಲುವೆ ಅಪಾಯಕಾರಿ ಸ್ಥಿತಿಯಲ್ಲಿ ಕಾಲುವೆ ತೋಡಲಾಗುತ್ತಿದೆ. ತೋಡಿದ ಕಾಲುವೆಯನ್ನು ಮುಚ್ಚುವಂತೆ ಗಂಭೀರ ಎಚ್ಚರಿಕೆ ನೀಡುವ ಕೆಲಸವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡುತ್ತಿಲ್ಲ. ಜನ ಶಾಪ ಹಾಕುವಂತಾಗಿದೆ.

ಮನೆಗಳು, ವಾಣಿಜ್ಯ ಮಳಿಗೆಗಳಂತೂ ಧೂಳಿನಿಂದ ತುಂಬಿ ಹೋಗುತ್ತಿದೆ. ದಿನಕ್ಕೊಮ್ಮೆ ಅಲ್ಲ, ಕ್ಷಣಕ್ಕೊಮ್ಮೆ ಸ್ವಚ್ಛಗೊಳಿಸಿದರೂ ಧೂಳುಮಯ. ವೃದ್ದರು, ಮಹಿಳೆಯರ ಸ್ಥಿತಿಯಂತೂ ದೇವರಿಗೇ ಪ್ರೀತಿ.

 

4 ವರ್ಷದ ಹಿಂದೆಯೇ ಮಂಜೂರಾಗಿದ್ದರೂ ಆರಂಭದ ಮೂರೂವರೆ ವರ್ಷ ಆಮೆ ಗತಿಯಲ್ಲಿ ಸಾಗಿದ ಸ್ಮಾರ್ಟ್ ಸಿಟಿ ಕೆಲಸಗಳು ಈಗ ಒಮ್ಮಿಂದೊಮ್ಮೆಲೆ ಎಲ್ಲ ಕಡೆ ಆರಂಭವಾಗಿದೆ. ಆದರೆ ಬೇಗ ಮುಗಿಸಬೇಕೆನ್ನುವ ಅವಸರ ಎಲ್ಲೂ ಕಾಣುತ್ತಿಲ್ಲ. ಕೇಳಿದರೆ ತಾಂತ್ರಿಕ ಕಾರಣ ನೀಡುತ್ತಾರೆ. ಈಗ ನೋಡಿದೆ ಇನ್ನೂ ವರ್ಷದವರೆಗೆ ಸ್ಮಾರ್ಟ್ ಆಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಜನ ಇದನ್ನೆಲ್ಲ ಸಹಿಸಿಕೊಳ್ಳುವುದು ಅನಿವಾರ್ಯ.

ಎಡವಿದ್ದೆಲ್ಲಿ?

  1. ಆರಂಭದಲ್ಲಿ ನಿಧಾನಗತಿ ಅನುಸರಿಸಿದ್ದು
  2. ಸ್ಪಷ್ಟವಾದ ಮತ್ತು ಗಟ್ಟಿಯಾದ ನಿರ್ಧಾರವಿಲ್ಲದ್ದು
  3. ಪದೇ ಪದೆ ಯೋಜನೆಯಲ್ಲಾಗುತ್ತಿರುವ ಮಾರ್ಪಾಡು
  4. ಒಮ್ಮೆಲೆ ಎಲ್ಲ ಕಡೆ ಕೆಲಸ ಕೈಗೆತ್ತಿಕೊಂಡಿದ್ದು
  5. ಗ್ಯಾಸ್ ಪೈಪ್ ಲೈನ್ ಕೆಲಸವನ್ನೂ ಇದೇ ವೇಳೆಗೆ ಆರಭಿಸಿದ್ದು

ಸಾರ್ವಜನಿಕರಿಗೆ ಎಚ್ಚರಿಕೆ

  1.  ತೀರಾ ಅನಿವಾರ್ಯತೆ ಇದ್ದಾಗಷ್ಟೆ ಹೊರಗಡೆ ಹೋಗಿ
  2. ಅತ್ಯಂತ ನಿಧಾನವಾಗಿ ಚಲಿಸಿರಿ
  3. ಪ್ರತಿ ಹೆಜ್ಜೆ ಇಡುವಾಗಲೂ ಎಚ್ಚರಿಕೆ ಇರಲಿ
  4. ಸಂಜೆ ಮತ್ತು ರಾತ್ರಿ ವೇಳೆ ಹೊರಗೆ ಹೋಗುವುದನ್ನು ಆದಷ್ಟು ನಿಲ್ಲಿಸಿ
  5. ವೃದ್ದರು, ಮಕ್ಕಳು, ಮಹಿಳೆಯರಲ್ಲಿ ವಿಶೇಷ ಕಾಳಜಿ ಇರಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button