ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹಾ ಕ್ರಾಂತಿ: ನಾಳೆ ಕೆಎಲ್ಇ ಸಂಸ್ಥೆಯ ಸ್ಥಾಪನಾ ದಿನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಾ ಕ್ರಾಂತಿ ಮಾಡಿರುವ, ಕೆಎಲ್ಇ ಮೈನಸ್ ಉತ್ತರ ಕರ್ನಾಟಕ ಎನ್ನುವುದನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲದಷ್ಟು ದೊಡ್ಡ ಸಾಧನೆ ಮಾಡಿರುವ ಕರ್ನಾಟಕ ಲಿಂಗಾಯತ ಎಜುಕೇಶನ್ ಸಂಸ್ಥೆಗೆ ಈ 104ರ ಸಂಭ್ರಮ.
ಶತಮಾನ ದಾಟಿದರೂ ಅದೇ ಉತ್ಸಾಹ, ಅದೇ ವೇಗದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ ಭಾರತದ ಗಡಿ ದಾಟಿ ಸಾಗರದಾಚೆಗೂ ತನ್ನ ಇರುವಿಕೆಯನ್ನು ತೋರಿಸಿಕೊಟ್ಟಿದೆ. ಆರಂಭದಲ್ಲಿ ಶಿಕ್ಷಣ ಕ್ಷೇತ್ರಕ್ಕಷ್ಟೆ ಸೀಮಿತವಾಗಿದ್ದರೂ ಬರ ಬರುತ್ತ ಆರೋದ್ಯ ಕ್ಷೇತ್ರದಲ್ಲಿ, ಈಗ ಅದನ್ನೂ ಮೀರಿ ಕೃಷಿ ಸೇರಿದಂತೆ ತನ್ನ ಹರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತ ಸಾಗುತ್ತಿದೆ.
ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸನ್ಮಾನ
ಶಿಕ್ಷಣವಂಚಿತ ಪ್ರದೇಶದಲ್ಲಿ ಸಪ್ತರ್ಷಿಗಳು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಕೆ.ಎಲ್.ಇ. ಸಂಸ್ಥೆ ಬುಧವಾರ ೧೦೪ ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ.
ಮುಂಜಾನೆ ೧೧ ಗಂಟೆಗೆ ಬೆಳಗಾವಿಯ ಕೆಎಲ್‌ಇ ಸೆಂಟೀನರಿ ಕನ್ವೆನ್ಷನ್ ಸೆಂಟರ್, ಜೆಎನ್‌ಎಂಸಿಯಲ್ಲಿ ಕಾರ್ಯಕ್ರಮ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವ ಮಾಧು ಸ್ವಾಮಿ ಅವರು ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮುಖ್ಯಸ್ಥರು, ಜಾಗತಿಕ ವ್ಯವಹಾರಗಳು, ಪ್ರಸೂತಿ ಹಾಗೂ ಸ್ತ್ರೀರೋಗ ಶಾಸ್ತ್ರ ಪ್ರಾಧ್ಯಾಪಕರು, ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ, ಫಿಲಾಡೆಲ್ಫಿಯಾ, ಯುಎಸ್‌ಎಯ ಡಾ. ರಿಚರ್ಡ್ ಡರ್ಮನ್ ಅವರು ಆಗಮಿಸಲಿದ್ದಾರೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆಯವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಎಚ್.ಕೌಜಲಗಿಯವರು ವಹಿಸಲಿದ್ದಾರೆ ಎಂದು ಕೆಎಲ್‌ಇ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ತಿಳಿಸಿದ್ದಾರೆ.
ಶತಮಾನದ ಮಹಾಬೆಳಕು
ಪ್ರಜಾಸತ್ತಾತ್ಮಕ ಆಡಳಿತವಿರುವ ಕೆ.ಎಲ್.ಇ. ಸಂಸ್ಥೆ ಇಂದು ಒಂದು ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ೨೭೦ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಸಾಧಿಸಿದೆ. ಕನ್ನಡಿಗರು ಭಾರತಕ್ಕೆ ನೀಡಿರುವ ಮೌಲಿಕ ಕಾಣಿಕೆ ಕೆ.ಎಲ್.ಇ. ಸೊಸೈಟಿ.
ಅಖಂಡ ಕರ್ನಾಟಕದ ಕನಸಿನೊಂದಿಗೆ ಕಾರ್ಯಾರಂಭ ಮಾಡಿದ ಕೆ.ಎಲ್.ಇ. ಇಂದು ೧೦೩ ವರ್ಷಗಳನ್ನು ಪೂರೈಸಿ ವಿಶ್ವವೇ ತನ್ನೆಡೆಗೆ ಬೆರಗುಗಣ್ಣಿನಿಂದ ನೋಡುವಂಥ ದಾಖಲಾರ್ಹ ಸಾಧನೆ ಮಾಡಿದೆ.
ಕೆ.ಎಲ್.ಇ. ಸಂಸ್ಥಾಪಕರ ಸ್ಫೂರ್ತಿ ಸ್ಥಾನಗಳು:
ಮುಂಬಯಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುವ ವಿದ್ಯಾಕೇಂದ್ರಗಳೇ ಇರಲಿಲ್ಲವಾದ್ದರಿಂದ ಕೆ.ಎಲ್.ಇ. ಸಂಸ್ಥಾಪಕ ಆಜೀವ ಸದಸ್ಯರು – ಉನ್ನತ ಶಿಕ್ಷಣ ಪಡೆಯಲು ಕೊಲ್ಲಾಪೂರ, ಪುಣೆ, ಮುಂಬಯಿಗಳಿಗೆ ಹೋಗಿ ಕಷ್ಟಪಟ್ಟು ಶಿಕ್ಷಣ ಪಡೆದು ಓದಿ ಪದವಿ ಗಳಿಸಿದರು.
ಪ್ರಥಮ ವರ್ಗದಲ್ಲಿ ಪ್ರಥಮರಾಗಿ ಎಂ.ಎ.ಪದವಿ ಪಡೆದರು. ವಿದ್ಯೆಯ ತವರು ಮನೆಯೆಂದೇ ಖ್ಯಾತಿ ಪಡೆದಿದ್ದ ಪುಣೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎನಿಸಿತ್ತು. ಅದನ್ನು ಇಡೀ ಮಹಾರಾಷ್ಟ್ರದ ಭೌದ್ದಿಕ ಬೆನ್ನೆಲುಬು ಎಂದೇ ಕರೆಯುತ್ತಿದ್ದರು. ಇಂಥ ವಾತಾವರಣ ನಮ್ಮ ಕೆ.ಎಲ್.ಇ. ಸಂಸ್ಥಾಪಕರಿಗೆ ಪೂರಕವಾಗಿತ್ತು; ಪ್ರೇರಕವಾಗಿತ್ತು.
ಪುಣೆಯ ಡೆಕ್ಕನ್ ಕಾಲೇಜು, ಡೆಕ್ಕನ್ ಎಜ್ಯುಕೇಶನ್ ಸೊಸೈಟಿಯ ಫರ್ಗ್ಯುಸನ್ ಕಾಲೇಜು, ಎಸ್.ಪಿ.ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜುಗಳು ಅಂದಿನ ಮುಂಬಯಿ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಿಕ್ಷಣ ಆಸಕ್ತ ಯುವಕರ ಸ್ಫೂರ್ತಿ ಕೇಂದ್ರಗಳಾಗಿದ್ದವು, ಆದರ್ಶದ ತಾಣಗಳೆಸಿದ್ದವು. ಅಲ್ಲಿಯ ಪ್ರಭಾವ ಈ ಯುವಕರಿಗೆ ಕನಸು ಕಟ್ಟಲು ದಾರಿ ಮಾಡಿತು. ಅಂತೆಯೆ ಕೆ.ಎಲ್.ಇ. ಸಂಸ್ಥಾಪಕರು ಕನ್ನಡ ಉಳಿಸಲು-ಬೆಳೆಸಲು ದೃಢ ಸಂಕಲ್ಪ ಮಾಡಿದರು. ಸ್ವಾರ್ಥರಹಿತ ಸಮಾಜ ಸೇವೆಗೆ ಕಂಕಣಬದ್ಧರಾದರು. ತಾವು ನೋವುಂಡು ಸಮಾಜಕ್ಕೆ ಸಿಹಿಯುಣಿಸಿದರು. ಅವರು ಸರ್ವಕಾಲಕ್ಕೂ ಆದರ್ಶಪ್ರಾಯರು.
೧೯೧೬ ರ ಪೂರ್ವದಲ್ಲಿ ಇಂದಿನ ಉತ್ತರ ಕರ್ನಾಟಕ ಅಂದರೆ ಅಂದಿನ ಮುಂಬಯಿ ಕರ್ನಾಟಕ ಶೈಕ್ಷಣಿಕವಾಗಿ ತೀರ ಹಿಂದುಳಿದ ಪ್ರದೇಶವಾಗಿತ್ತು. ಈ ಭಾಗದಲ್ಲಿ ಒಂದೇ ಒಂದು ಕಾಲೇಜು ಇರಲಿಲ್ಲ. ಬೆಳಗಾವಿಯಲ್ಲಿಯೂ ಅಷ್ಟೇ. ಆಗಿನ ಕಾಲದಲ್ಲಿ ಬೆಳಗಾವಿಯಲ್ಲಿ ಇದ್ದುದು ಕೇವಲ ಮೂರು ಶಾಲೆಗಳು. ಬೆನನ್‌ಸ್ಮಿತ್ ಶಾಲೆ (೧೮೩೨), ಸರದಾರ್ಸ ಶಾಲೆ (೧೮೫೦) ಹಾಗೂ ಸೇಂಟ ಪಾಲ್ಸ್ ಶಾಲೆ (೧೮೫೬). ಈ ಶಾಲೆಗಳಲ್ಲಿ ಕೇವಲ ಉಚ್ಚವರ್ಗದವರಿಗೆ ಮಾತ್ರ ಪ್ರವೇಶ ದೊರೆಯುತ್ತಿತ್ತು. ಸಾಮಾನ್ಯರಿಗೆ ಪ್ರವೇಶ ದೊರೆಯುವುದು ಸಾಧ್ಯವಿರಲಿಲ್ಲ.
ಕೆಎಲ್‌ಇ ಸಂಸ್ಥೆಯ ಸ್ಥಾಪನೆಯ ಯಶೋಗಾಥೆ
೧೯೧೬ರಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಸಪ್ತರ್ಷಿಗಳೆಂದೆ ಖ್ಯಾತರಾದ ಏಳು ಜನ ಶಿಕ್ಷಕರು ಲಿಂಗೈಕ್ಯ ಪಂಡಿತಪ್ಪ ಚಿಕ್ಕೋಡಿ, ಎಂ.ಆರ್.ಸಾಖರೆ, ಶಿ.ಶಿ.ಬಸವನಾಳ, ಎಚ್.ಎಫ್.ಕಟ್ಟೀಮನಿ, ಬಿ.ಬಿ.ಮಮದಾಪುರ, ಬಿ.ಎಸ್.ಹಂಚಿನಾಳರು, ಸರದಾರ ವೀರನಗೌಡ ಪಾಟೀಲ ಹಾಗೂ ಅವರಿಗೆ ಅಖಂಡ ಬೆಂಬಲ ನೀಡಿದ ಪ್ರಾತಃಸ್ಮರಣೀಯ ರಾವಬಹದ್ದೂರ ಅರಟಾಳ ರುದ್ರಗೌಡರು, ರಾವ ಬಹಾದ್ದೂರ ವೈಜಪ್ಪ ಅನಿಗೋಳ ಹಾಗೂ ರಾವ ಬಹಾದ್ದೂರ ವ್ಹಿ.ಜಿ. ನಾಯಕ ದೇಸಾಯಿ ಚಚಡಿ ಇವರ ನಿಸ್ವಾರ್ಥ ಸೇವೆ ವ್ಯರ್ಥವಾಗದೆ ಇಡೀ ಸಮಾಜಕ್ಕೆ ಹೊಸ ಪ್ರಗತಿಯ ಹೆದ್ದಾರಿ ನಿರ‍್ಮಿಸಿತು.
ಪೇಶ್ವೆಗಳ ಆಡಳಿತದಲ್ಲಿ ಮರಾಠಿಮಯವಾಗಿದ್ದ ಕನ್ನಡದ ನೆಲವನ್ನು ಹದಗೊಳಿಸಿ ಬೆಳಗಾವಿಯಲ್ಲಿ ಕೆ.ಎಲ್.ಇ. ಮೂಲಕ ಕನ್ನಡದ ಬೀಜವನ್ನು ಬಿತ್ತಿದ ಕೆ.ಎಲ್.ಇ. ಸಂಸ್ಥಾಪಕರು, ದಾನಿಗಳನ್ನು ಗುರುತಿಸಿ ಅವರ ಮನೆಗಳಿಗೆ ಖುದ್ದಾಗಿ ಹೋಗಿ ದೇಣಿಗೆ ಸಂಗ್ರಹಿಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.
ಅರಟಾಳ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪಿಸಲು ಸಂಗ್ರಹಿಸಿದ ನಿಧಿಯನ್ನು ಬ್ಯಾಂಕಿನಲ್ಲಿಟ್ಟರು. ಆ ಹಣದಿಂದ ದೊರೆತ ಬಡ್ಡಿ ಹಣ ರೂ ೨೭೨೭-೦೪ ಆಣೆ ಹಾಗೂ ತಮ್ಮ ವೈಯಕ್ತಿಕ ೪೦೦ ರೂ.ಗಳನ್ನು ಸೇರಿಸಿ ಆ ಏಳು ಜನ ಶಿಕ್ಷಕರಿಗೆ ನೀಡಿದ್ದರಿಂದಲೇ ಬೆಳಗಾವಿಯಲ್ಲಿ ಆಂಗ್ಲೋ ವ್ಹರ್ನಾಕ್ಯುಲರ ಶಾಲೆ ೧೩-೧೧-೧೯೧೬ ರಂದು ಪ್ರಾರಂಭವಾಯಿತು.
೧೯೧೬ ರಿಂದ ೧೯೩೦ ರವರೆಗೆ ಬೆಳಗಾವಿಯ ಕಿಲ್ಲೆಯೊಳಗಿನ ಬಂಗ್ಲೆ ನಂ.೨೪ರಲ್ಲಿ ನಡೆದ ಈ ಶಾಲೆ ಈ ಅವಧಿಯಲ್ಲಿ ತುಂಬ ಕಷ್ಟದ ಹಾದಿಯಲ್ಲಿ ಮುನ್ನಡೆಯಿತು. ಶಿಕ್ಷಣದ ಬಗೆಗಿನ ಮಹತ್ವ ಅರಿಯದ ಅನಕ್ಷರಸ್ಥ ಸಮಾಜವೊಂದರ ಹೀನಾಯ ಸ್ಥಿತಿಗೆ ಮರುಗಿದ ಸಂಸ್ಥಾಪಕರು, ಸಮಾಜ ಸುಶಿಕ್ಷಿತಗೊಂಡರೆ ಮಾತ್ರ ಬದಲಾವಣೆ ಹಾಗೂ ಪ್ರಗತಿ ಸಾಧ್ಯ ಎಂಬುದನ್ನು ಅರಿತಿದ್ದರು. ಅಂತೆಯೇ ಅವರು ಬ್ರಿಟಿಷ ಆಡಳಿತದಲ್ಲಿ ಹೆಚ್ಚಿನ ವೇತನದ ಉನ್ನತ ಹುದ್ದೆಗಳೂ ಸಹಜವಾಗಿ ದೊರೆಯುತ್ತಿದ್ದಾಗಲೂ ಅವುಗಳನ್ನು ಧಿಕ್ಕರಿಸಿ ಕಡಿಮೆ ವೇತನದಲ್ಲಿಯೇ ’ಮಾಸ್ತರಕಿ’ ಮಾಡಿ ಉತ್ತರ ಕರ್ನಾಟಕದ ಇತಿಹಾಸವನ್ನು ಬದಲಿಸಲು ಅಹರ್ನಿಶಿ ಶ್ರಮಿಸಿದರು, ನಾಡುನುಡಿಗಳನ್ನು ಉಳಿಸಿದರು ಬೆಳೆಸಿದರು.
ಕೆ.ಎಲ್.ಇ.ಸಂಸ್ಥೆಯನ್ನು ಸ್ಥಾಪಿಸಿದಾಗ ಸಪ್ತರ್ಷಿಗಳು ಹಗಲಿರುಳು ದುಡಿದರು. ಅವರಿಗೆ ಬೆನ್ನೆಲುಬಾಗಿ ನಿಂತವರು ರಾಜಾ ಲಖಮಗೌಡರು, ಶಿರಸಂಗಿ ಏಜ್ಯುಕೇಶನ್ ಟ್ರಸ್ಟ್ ಹಾಗೂ ದಾನಶೂರ ಭೂಮರಡ್ಡಿ ಬಸಪ್ಪನವರು ಪ್ರಮುಖರು. ಈ ಮಹಾದಾನಿಗಳಿಂದ ಸಂಸ್ಥೆಯ ಕನಸು ಸಾಕಾರಗೊಂಡಿತು.
೧೯೩೩ ರಲ್ಲಿ ಲಿಂಗರಾಜ ಮಹಾವಿದ್ಯಾಲಯ ಉತ್ತರ ಕರ್ನಾಟಕದ ಮೊದಲ ಪದವಿ ಕಾಲೇಜ ಎನಿಸಿಕೊಂಡಿತು. ೧೯೩೫ ರಲ್ಲಿ ಲಿಂಗರಾಜ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭಗೊಂಡಿತು. ೧೯೪೪ ರಲ್ಲಿ ಆರ್.ಎಲ್.ವಿಜ್ಞಾನ ವಿಭಾಗ ಸ್ವತಂತ್ರವಾಗಿ ಸ್ಥಾಪನೆಗೊಂಡಿತು. ೧೯೪೭ರಲ್ಲಿ ಬಿ.ವ್ಹಿ.ಭೂಮರಡ್ಡಿ ಅಭಿಯಾಂತ್ರಿಕ ತಾಂತ್ರಿಕ ಕಾಲೇಜು ಹುಬ್ಬಳ್ಳಿಯ ಸ್ಥಾಪನೆಗೊಂಡಿತು. ಅಂತೆಯೆ ೧೯೬೩ ರಲ್ಲಿ ಜವಾಹರಲಾಲ ನೆಹರು ಮೆಡಿಕಲ್ ಕಾಲೇಜು ಸ್ಥಾಪನೆಗೊಂಡಿತು.
ಡಾ.ಪ್ರಭಾಕರ ಕೋರೆ ಯುಗ
೧೯೮೪ ಕೆ.ಎಲ್.ಇ. ಸಂಸ್ಥೆಯ ಚರಿತ್ರೆಯಲ್ಲಿ ದಾಖಲಾರ್ಹ ವರ್ಷ. ಡಾ. ಪ್ರಭಾಕರ ಕೋರೆ ಅವರು ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದರು. ಇವರ ಆಗಮನ ಪೂರ್ವದಲ್ಲಿ ೩೮ ರಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆ ಇಂದು ೨೭೦ ಕ್ಕೆ ತಲುಪಿದೆ. ಕರ್ನಾಟಕ ಹಾಗೂ ವಿವಿಧ ರಾಜ್ಯಗಳಲ್ಲಿ ಗುಣಾತ್ಮಕ ಶಿPಣ ನೀಡುತ್ತಿರುವ ಈ ಸಂಸ್ಥೆಯು ೧೬,೦೦೦ ಸಿಬ್ಬಂದಿ ವರ್ಗ, ೧.೨೫ ಲಕ್ಷ ವಿದ್ಯಾರ್ಥಿಗಳಿಂದ ಏಶಿಯಾದಲ್ಲಿಯೇ ಪ್ರಭಾವಿ ಶಿಕ್ಷಣ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಡಾ.ಪ್ರಭಾಕರ ಕೋರೆಯವರ ಆಗಮನ ಸಂಸ್ಥೆಯ ಬೆಳವಣಿಗೆಯಲ್ಲಿ ಒಂದು ಹೊಸ ಸಂಚಲನವನ್ನೇ ಉಂಟುಮಾಡಿತ್ತು. ಅವರ ನಾಯಕತ್ವ, ದೂರದರ್ಶಿತ್ವ, ರಚನಾತ್ಮಕ ವಿಚಾರಗಳು ಸಂಸ್ಥೆಯು ಶಿಕ್ಷಣದ ಎಲ್ಲ ಹಂತಗಳನ್ನೂ ತಲುಪಿತು. ಕಲೆ -ವಾಣಿಜ್ಯ -ವಿಜ್ಞಾನದೊಂದಿಗೆ ವೈದ್ಯಕೀಯ, ತಾಂತ್ರಿಕ, ಬಹುತಾಂತ್ರಿಕ, ಕೃಷಿ, ಬಿಜೆನಸ್ ಮ್ಯಾನೇಜಮೆಂಟ್, ಫ್ಯಾಷನ್ ಟೆಕ್ನಾಲಜಿ, ಹೋಮ್ ಸೈನ್ಸ್, ಆಯುರ್ವೇದ, ದಂತ ವೈದ್ಯಕೀಯ, ನರ್ಸಿಂಗ್, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸಮುದಾಯ ಬಾನುಲಿ ಕೇಂದ್ರಗಳು ಹೀಗೆ ಶಿಶು ವಿಹಾರದಿಂದ ಹಿಡಿದು ಸ್ನಾತಕೋತ್ತರದವರೆಗೆ ಸಂಸ್ಥೆ ವಿಸ್ತಾರಗೊಂಡಿದೆ.
ಆರೋಗ್ಯ ಹಾಗೂ ಸಂಶೋಧನೆ
ಅಂತೆಯೇ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ಮಹೋನ್ನತ ಉದ್ದೇಶ ಹೊತ್ತ ಕೆ.ಎಲ್.ಇ.ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದೆ. ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಸಂಸ್ಥೆಯ ಮುಕುಟಮಣಿಯಾಗಿದೆ. ಇದು ಉತ್ತರ ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರದ ಜನತೆಗೆ ಆರೋಗ್ಯಧಾಮವೆನಿಸಿದೆ. ೨೪೦೦ ಹಾಸಿಗೆಗಳ ಆಸ್ಪತ್ರೆಯನ್ನು ಜನರ ಸೇವೆಗೆ ಮುಡುಪಾಗಿಟ್ಟಿದೆ.
ದೇಶದ ೧೦ ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆಗಳಲ್ಲಿ ಒಂದೆಂದು ಇಂಡಿಯಾ ಟುಡೆ ಮ್ಯಾಗಜಿನ್ ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿದ್ದು ಅದರ ಆರೋಗ್ಯ ಸೇವೆಗೆ ನಿದರ್ಶನ. ಸದ್ಯ ಬೆಳಗಾವಿ ಹತ್ತಿರವಿರುವ ಎಳ್ಳೂರ ರಸ್ತೆಯಲ್ಲಿ ೫೦೦ ಹಾಸಿಗೆಗಳ ಉಚಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.
ಅಂತೆಯೆ ಗೋಕಾಕ, ಚಿಕ್ಕೋಡಿ, ಅಂಕೋಲಾ, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ಒಟ್ಟು ೪೦೦೦ ಹಾಸಿಗೆಗಳ ಆಸ್ಪತ್ರೆಗಳು ಸೇವೆಗೆ ಅಣಿಯಾಗಿವೆ. ಇದರಲ್ಲಿ ಬಡಜನರಿಗೆ ೧೯೦೦ ಉಚಿತ ಹಾಸಿಗೆಗಳಿವೆ. ದೇಶದಲ್ಲಿಯೇ ಸರಕಾರವನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ಗುಣಮಟ್ಟದ ಆರೋಗ್ಯಸೇವೆಗೆ ಮುಂದಾಗಿದ್ದರೆ ಅದು ಕೆ.ಎಲ್.ಇ.ಸಂಸ್ಥೆ ಮಾತ್ರ ಎಂಬುವುದು ಹೆಮ್ಮೆಯ ಸಂಗತಿ. ಇತ್ತೀಚಿಗೆ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸುವ ಮೂಲಕ ತನ್ನ ಆರೋಗ್ಯಸೇವೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದನ್ನು ಅವಲೋಕಿಸಬಹುದು.
ಸಂಸ್ಥೆಯನ್ನು ಹುಟ್ಟುಹಾಕುವುದು ಮಹತ್ವವಲ್ಲ, ಅದನ್ನು ಸಮಾಜಮುಖಿಯಾಗಿ ಮುನ್ನಡೆಸುವುದು ಮುಖ್ಯ. ಸಂಸ್ಥೆ ಯಾವುದೇ ಇರಲಿ, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವಂತಿರಬೇಕು. ಮೂಲಭೂತ ಅವಶ್ಯಕತೆಗಳನ್ನು ನೀಡುವಂತಿರಬೇಕು. ಸಮಾಜದಲ್ಲಿಯ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಬಿತ್ತುವಂತಿರಬೇಕು.
ಕೆ.ಎಲ್.ಇ.ಸಂಸ್ಥೆ ಈ ಮೌಲ್ಯಗಳನ್ನು ಯಶಸ್ವಿಯಾಗಿ ಪೂರೈಸಿ ಸಮಾಜದ ಬೆಳಕಾಗಿದೆ, ಸಮಾಜಮುಖಿಯೆನಿಸಿದೆ. ಹಾಗಾಗೀ ಕೆ.ಎಲ್.ಇ. ಸಮಾಜದ ಆಸ್ತಿ. ಸಪ್ತರ್ಷಿಗಳ ಆಶಯದಂತೆ ಇಂದು ಸಂಸ್ಥೆ ಡಾ.ಪ್ರಭಾಕರ ಕೋರೆಯವರ ಸಮರ್ಥ ನೇತೃತ್ವದಲ್ಲಿ ಅಹರ್ನಿಶಿಯಾಗಿ ದುಡಿಯುತ್ತಿದೆ, ಗೌರಿಶಿಖರದಷ್ಟು ಬೆಳೆದುನಿಂತಿದೆ.
೨೦೧೬ ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿರುವ ಕೆ.ಎಲ್.ಇ.ಸಂಸ್ಥೆಗೆ ಈಗ ೧೦೪ನೇ ವರ್ಷಾಚರಣೆಯ ಸಂಭ್ರಮ. ಶತಮಾನೋತ್ಸವ ಸಂದರ್ಭದಲ್ಲಿ ದೇಶದ ಪ್ರಭಾವಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸಿ ಸಂಸ್ಥೆಯ ಸಂಸ್ಥಾಪಕರ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಶುಭಕೋರಿದ್ದಾರೆ.
ಕೆಎಲ್‌ಇ ಸಂಸ್ಥೆ ಹೀಗೆ ವಿಸ್ತಾರೋತ್ತರವಾಗಿ ಬೆಳೆಯುವುದಕ್ಕೆ ಪ್ರಮುಖವಾಗಿ ಸಂಸ್ಥಾಪಕರ ಸತ್ಯ, ಪ್ರೇಮ, ಸೇವೆ, ಸ್ವಾರ್ಥತ್ಯಾಗ ಹಾಗೂ ಅವರ ಆಶೀರ್ವಾದಗಳೇ ಕಾರಣಗಳಾಗಿವೆ. ಪ್ರತಿ ವರ್ಷ ೧೩ ನವೆಂಬರ್ ರಂದು ಸಂಸ್ಥೆಯು ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತದೆ. ಈ ಮೂಲಕ ಸಂಸ್ಥಾಪಕರನ್ನು ಗೌರವಪೂರ್ವಕವಾಗಿ ಕೃತಜ್ಞತಾಭಾವದಿಂದ ಸ್ಮರಿಸುತ್ತದೆ. ಈ ದಿನದಂದು ಪ್ರತಿವರ್ಷ ವಿಶೇಷ ಸಾಧನೆ ಮಾಡಿದ ಅಂಗ ಸಂಸ್ಥೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ