Kannada NewsKarnataka NewsLatest

ಟಿಕೆಟ್ ತಪ್ಪಿದ್ದಷ್ಟೆ ಲಕ್ಷ್ಮಣ ಸವದಿಯ ಸಮಸ್ಯೆ ಅಲ್ಲ!

ಎಂ.ಕೆ.ಹೆಗಡೆ, ಬೆಳಗಾವಿ – ಡಿ.5ರ ಉಪಚುನಾವಣೆ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯ ರಾಜಕೀಯ ಭವಿಷ್ಯವನ್ನೂ ನಿರ್ಧರಿಸಲಿದೆ. ಲಕ್ಷ್ಮಣ ಸವದಿ ಚುನಾವಣೆಗೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಆದರೂ ಅವರುಗೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಅದು ಹೇಗೆ? ಮುಂದೆ ಓದಿ.

ಲಕ್ಷ್ಮಣ ಸವದಿ ಶಾಸಕರಲ್ಲದಿದ್ದರೂ ಮಂತ್ರಿ ಮಾಡಿದ್ದೇ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ನಂತರ ಉಪಮುಖ್ಯಮಂತ್ರಿ ಮಾಡಿದಾಗಲಂತೂ ಇನ್ನಷ್ಟು ಚರ್ಚಿಯಾಗಿತ್ತು. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ನಾಯಕತ್ವ ಬೆಳೆಸುವ ಉದ್ದೇಶದಿಂದಲೇ ಲಕ್ಷ್ಮಣ ಸವದಿಗೆ ಪಟ್ಟ ಕಟ್ಟಲಾಗಿದೆ ಎನ್ನುವ ಮಾತೂ ಕೇಳಿಬಂದಿತ್ತು.

ಆದರೆ ಬಿಜೆಪಿಯ ಆಂತರಿಕ ವಲಯದಲ್ಲಿ ಈ ವಿಷಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಅನೇಕ ನಾಯಕರು ಬಹಿರಂಗವಾಗಿಯೇ ಹೇಳಿಕೆಯನ್ನೂ ನೀಡಿದ್ದರು.

3 ತಿಂಗಳಲ್ಲಿ ಶಾಸಕರಾಗಬೇಕು

ಲಕ್ಷ್ಮಣ ಸವದಿ ಶಾಸಕರಲ್ಲದಿರುವುದರಿಂದ ಅವರು ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕೆಂದರೆ ಇನ್ನು 3 ತಿಂಗಳಲ್ಲಿ ಶಾಸಕರಾಗಲೇ ಬೇಕು. ಆದರೆ ಅಥಣಿ ಕ್ಷೇತ್ರಕ್ಕೆ ಮಹೇಶ ಕುಮಟಳ್ಳಿಗೆ ಟಿಕೆಟ್ ಅಂತಿಮಗೊಳಿಸಿರುವುದರಿಂದ ಲಕ್ಷ್ಮಣ ಸವದಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರು ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.

ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲೂ ಸಧ್ಯಕ್ಕೆ ಯಾವುದೇ ಸ್ಥಾನ ಖಾಲಿ ಇಲ್ಲ. ಯಾರನ್ನಾದರೂ ರಾಜಿನಾಮೆ ಕೊಡಿಸಿ ಸವದಿಯನ್ನು ನಾಮಕರಣ ಮಾಡಬೇಕಾಗುತ್ತದೆ. ಅಂತಹ ಸಾಹಸಕ್ಕೆ ಪಕ್ಷ ಮುಂದಾಗುತ್ತದೆಯೋ ಕಾದು ನೋಡಬೇಕಿದೆ.

ಹೈಕಮಾಂಡ್ ಗೆ ಬಿಟ್ಟಿದ್ದು

ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಲಕ್ಷ್ಮಣ ಸವದಿ ಚರ್ಚೆ ನಡೆಸಿದ್ದಾರೆ. ಉಪಚುನಾವಣೆ ಮತ್ತು ತಮ್ಮ ಭವಿಷ್ಯದ ಕುರಿತು ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ, ಮಹೇಶ ಕುಮಟಳ್ಳಿ ಗೆಲ್ಲಿಸುವ ಕೆಲಸವನ್ನು ಮಾಡಿ. ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಉಳಿದ ವಿಚಾರವನ್ನು ಹೈಕಮಾಂಡ್ ಗೆ ಬಿಡೋಣ ಎಂದು ಬುದ್ದಿ ಹೇಳಿ ಕಳಿಸಿದ್ದಾರೆ ಎನ್ನಲಾಗಿದ.

ನನ್ನನ್ನು ಉಪಮುಖ್ಯಮಂತ್ರಿ ಮಾಡಿದ್ದು ಪಕ್ಷದ ಹೈಕಮಾಂಡ್. ನನ್ನನ್ನು ಉಳಿಸಿಕೊಳ್ಳುವ ಕೆಲಸವನ್ನೂ ಅವರೇ ಮಾಡುತ್ತಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ಮಹೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸುವುದಕ್ಕಷ್ಟೆ ನಾನು ಗಮನ ನೀಡುತ್ತೇನೆ ಎಂದು ಲಕ್ಷ್ಮಣ ಸವದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನೊಂದು ಸವಾಲು

ತಮ್ಮ ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಸವದಿ ಎದುರಿಗಿರುವ ಒಂದು ಸವಾಲಾದರೆ ಮತ್ತೊಂದು ಮಹೇಶ ಕುಮಟಳ್ಳಿಯನ್ನು ಗೆಲ್ಲಿಸಿಕೊಂಡುಬರುವುದು. ಕಳೆದ ಚುನಾವಣೆಯಲ್ಲಿ ಕೇವಲ ಒಂದೂವರೆ ವರ್ಷದ ಹಿಂದೆ ಯಾರ ವಿರುದ್ಧ ಹೋರಾಟ ನಡೆಸಿದ್ದರೋ ಅವರ ಪರವಾಗಿಯೇ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿಕೊಂಡು ಬರುವುದು ಸವದಿ ಮುಂದಿರುವ ಮತ್ತೊಂದು ದೊಡ್ಡ ಸವಾಲು.

ಅಥಣಿ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ಬಿಜೆಪಿ ಸವದಿ  ಹೆಗಲಿಗೆ ಹಾಕಿದೆ. ಹಾಗಾಗಿ ಅದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ, ಮಹೇಶ ಕುಮಟಳ್ಳಿಯನ್ನು ಗೆಲ್ಲಿಸಿದರೆ ಅಥಣಿ ಕ್ಷೇತ್ರವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾದ ಸ್ಥಿತಿ ಲಕ್ಷ್ಮಣ ಸವದಿಯದ್ದು. ಇದರಿಂದಾಗಿ ತಮ್ಮ ರಾಜಕೀಯ ಭಿಷ್ಯವನ್ನೇ ಕತ್ತಲೆಗೆ ದೂಡಿಕೊಂಡ ಅನುಭವ ಅವರದ್ದಾಗಬಹುದು. ಹಾಗಾಗಿ ಕುಮಟಳ್ಳಿಯನ್ನು ಗೆಲ್ಲಿಸಿದರೂ ಕಷ್ಟ, ಸೋಲಿಸಿದರೂ ಕಷ್ಟ. ಅಡಗತ್ತರಿಯಲ್ಲಿ ಸಿಕ್ಕಿದ ಅನುಭವ ಸವದಿ ಅವರದ್ದು.

3ನೇ ಸವಾಲು

ಇದರ ಜೊತೆಗೆ ಇನ್ನೊಂದು ಸವಾಲು ಸವದಿಯವರಿಗೆ ಎದುರಾಗುವ ಸಾಧ್ಯತೆ ಇದೆ. ರಾಜು ಕಾಗೆ ಅವರನ್ನು ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದರೆ ಸವದಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸವದಿ ಮತ್ತು ಕಾಗೆ ಹಲವು ವರ್ಷಗಳ ಸ್ನೇಹಿತರು. ಪ್ರತಿ ಚುನಾವಣೆಯಲ್ಲೂ ಇಬ್ಬರು ಪರಸ್ಪರ ಸಹಕಾರದಿಂದ ಚುನಾವಣೆ ಎದುರಿಸುತ್ತ ಬಂದಿದ್ದಾರೆ. ಕ್ಷೇತ್ರದಲ್ಲಿ ಲವ -ಕುಶ ಎನ್ನುವ ರೀತಿಯಲ್ಲಿ ಹೆಸರು ಮಾಡಿದ್ದಾರೆ. ಅಂತಹ ರಾಜು ಕಾಗೆ ವಿರುದ್ಧ ಲಕ್ಷ್ಮಣ ಸವದಿ ಪ್ರಚಾರ ಮಾಡಲು ಸಾಧ್ಯವೇ? ಮಾಡುತ್ತಾರಾ ಎನ್ನುವುದು ಪ್ರಶ್ನೆ.

ವಿರೋಧಿಯನ್ನು ಅಪ್ಪಿಕೊಂಡು, ಸ್ನೇಹಿತನನ್ನು ದೂರ ತಳ್ಳುವುದು ಸರಳವಾದ ಕೆಲಸವೇ?

ಈ ಎಲ್ಲ ಸವಾಲುಗಳು ಇನ್ನು 15-20 ದಿನಗಳಲ್ಲಿ ಲಕ್ಷ್ಮಣ ಸವದಿಯ ಮುಂದಿದೆ. ಅವುಗಳನ್ನು ಹೇಗೆ ನಿಭಾಯಿಸುತ್ತಾರೆ? ಪಕ್ಷದ ವಿಶ್ವಾಸ ಮತ್ತು ಉಪಮುಖ್ಯಮಂತ್ರಿ ಸ್ಥಾನ ಹೇಗೆ ಉಳಿಸಿಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಬೀದಿಗೆ ಬಿದ್ರಾ ಆರ್. ಶಂಕರ್? ಮಂತ್ರಿ ಮಾಡ್ತೀನಿ ಎಂದ ಯಡ್ಯೂರಪ್ಪ

ಪ್ರಕಾಶ ಹುಕ್ಕೇರಿ ಕಾಗವಾಡಕ್ಕೆ, ರಾಜು ಕಾಗೆ ಅಥಣಿಗೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button