ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ತಾಲೂಕಿನಲ್ಲಿ ಕಳೆದ ಆಗಷ್ಟ್ ತಿಂಗಳಲ್ಲಿ ಬಿದ್ದ ಮಳೆಯಿಂದ ಆಗಿರುವ ಹಾನಿಗಳ ಕುರಿತು ಮತ್ತೊಮ್ಮೆ ಸಮರ್ಪಕ ಸಮೀಕ್ಷೆ ನಡೆಸುವಂತೆ ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೂಚಿಸಿದ್ದಾರೆ.
ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ತಾಲೂಕಿನಾದ್ಯಂತ ಬಿದ್ದ ಬಾರಿ ಮಳೆಯಿಂದಾಗಿ ಸಂಭವಿಸಿದ ಹಾನಿ ಮತ್ತು ಕೈಕೊಂಡ ಪರಿಹಾರಗಳ ಕುರಿತು ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಬೆಳಗಾವಿ ತಾಲೂಕಿನಲ್ಲಿ ಮಳೆಯಿಂದ ಉಂಟಾದ ಆಸ್ತಿ-ಪಾಸ್ತಿ ಹಾನಿ, ರಸ್ತೆಗಳು, ಶಾಲಾ ಕಟ್ಟಡಗಳು ಹಾಗೂ ಅಂಗನವಾಡಿ ಕಟ್ಟಡಗಳು, ಬೆಳೆನಾಶ ಸೇರಿದಂತೆ ಅತಿವೃಷಿಯಿಂದಾದ ಹಾನಿಯ ಕುರಿತು ಮಾಹಿತಿ ಪಡೆದರು.
ಸರಿಯಾಗಿ ಸರ್ವೆಯಾಗದೇ ಬಾಕಿ ಉಳಿದಿರುವ ಮನೆಗಳನ್ನು ಸಹ ಮತ್ತೊಮ್ಮೆ ಸರ್ವೆ ಮಾಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಹಾಗೂ ಅರ್ಹ ಸಂತ್ರಸ್ಥರುಗಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ತಹಶಿಲ್ದಾರ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಅದರಂತೆ ರಸ್ತೆಗಳು, ಶಾಲಾ ಕಟ್ಟಡಗಳು, ಹಾಗೂ ಅಂಗನವಾಡಿ ಕಟ್ಟಡಗಳನ್ನು ಸಹ ಸರಿಯಾಗಿ ಪರಿಶೀಲಿಸಿ ಕ್ರಮ ಕೈಕೊಳ್ಳಬೇಕೆಂದು ಸೂಚಿಸಿದರು.
ಸಭೆಗೆ ಬೆಳಗಾವಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಹಾಗೂ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ