ಪ್ರಗತಿವಾಹಿನಿ ಸುದ್ದಿ, ಗೋಕಾಕ -“ಈ ಹುಚ್ಚನನ್ನು ಮಂತ್ರಿ ಮಾಡಿದರಲ್ಲ ಅಂತ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಡಿ.ಕೆ.ಶಿವಕುಮಾರ ಅವರನ್ನು ನಾನು ವಿರೋಧಿಸಿದ್ದೆ, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ. ಈಗ ನಾವೆಲ್ಲ ಒಂದೇ” ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಗೋಕಾಕದಲ್ಲಿ ಮಾತನಾಡಿದ ಸತೀಶ್, ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.
“ಮೊದಲು ನಾನು ಲಕ್ಷ್ಮಿ ಹೆಬ್ಬಾಳಕರ್ ಮನೆಗೆ ಚಾ ಕುಡಿಯಲು ಹೋಗುತ್ತಿದ್ದುದು ನಿಜ. ಈ ಹುಚ್ಚನನ್ನು ಮಂತ್ರಿ ಮಾಡಿದರಲ್ಲ ಅಂತ ಲಕ್ಷ್ಮಿ ಹೆಬ್ಬಾಳಕರ್, ಡಿ.ಕೆ.ಶಿವಕುಮಾರ ಜೊತೆ ಜಗಳ ಮಾಡಿದೆವು. ಲಕ್ಷ್ಮಿ ಹೆಬ್ಬಾಳಕರ್ ಜೊತೆ ನಮ್ಮದೇನಿಲ್ಲ. ಈಗ ಅವರು ಚುನಾವಣೆಗೆ ಉಸ್ತುವಾರಿಯಾಗಿದ್ದಾರೆ. ಮತ್ತೆ ಅವರ ಮನೆಗೆ ಚಾ ಕ್ಕೂ ಹೋಗುತ್ತೇನೆ, ಊಟಕ್ಕೂ ಹೋಗುತ್ತೇನೆ, ಎಲ್ಲದಕ್ಕೂ ಹೋಗುತ್ತೇನೆ. ಈಗ ನಾವೆಲ್ಲ ಒಂದೇ” ಎಂದು ಸತೀಶ್ ವಿವರಿಸಿದರು.
“ಲಕ್ಷ್ಮಿ ಹೆಬ್ಬಾಳಕರ್ ಗೆ ಯಾವ ಸ್ಥಾನವನ್ನೂ ಕೊಡಬಾರದೆಂದು ಕಂಡೀಷನ್ ಹಾಕಿದ್ದೆ, ಆದರೆ ಅವರನ್ನು ನಿಗಮ ಮಂಡಳಿಗೆ ನೇಮಕ ಮಾಡಿದರು. ನಾನು ಸುಮ್ಮನೇ ಕುಳಿತಿದ್ದರೆ ಅವರನ್ನು ಮಂತ್ರಿ ಮಾಡುತ್ತಿದ್ದರು” ಎಂದು ನಿನ್ನೆಯಷ್ಟೆ ರಮೇಶ್ ಜಾರಕಿಹೊಳಿ ಗುಟ್ಟು ಹೊರಹಾಕಿದ್ದರು.
ಇಂದು ಸತೀಶ್ ಜಾರಕಿಹೊಳಿ ಇದಕ್ಕೆಲ್ಲ ಉತ್ತರ ಕೊಟ್ಟಿದ್ದಾರೆ. ಜೊತೆಗೆ ಇನ್ನಷ್ಟು ಗುಟ್ಟನ್ನು ಹೊರಹಾಕಿದ್ದಾರೆ.
“ಮೊದಲು ಲಕ್ಷ್ಮಿ ಹೆಬ್ಬಾಳಕರ್, ಡಿ.ಕೆ.ಶಿವಕುಮಾರ ಗುಂಪಿನಲ್ಲೇ ಈತನೂ ಇದ್ದ. ಅವರಲ್ಲಿ ಇಂಟರ್ನಲ್ ಏನು ಬಂತೋ ಗೊತ್ತಿಲ್ಲ. ಇಂದು ಬೆಳಗ್ಗೆ ಆತ ಎಚ್. ವಿಶ್ವನಾಥ ನನ್ನ ಲೀಡರ್ ಎನ್ನುತ್ತಿದ್ದಾನೆ. ನಾಳೆ ಯಾರ ಬಗ್ಗೆಹೇಳುತ್ತಾನೋ ಗೊತ್ತಿಲ್ಲ. ಶೇರ್ ಮಾರ್ಕೆಟ್ ಇದ್ದ ಹಾಗೆ. ಒಮ್ಮೆ ಏರತ್ತದೆ, ಮತ್ತೊಮ್ಮೆ ಇಲಿಯುತ್ತದೆ. ಅಂದಂದಿನ ಮಾರ್ಕೆಟ್ ರೀತಿಯಲ್ಲಿ ಮಾತನಾಡುತ್ತಾನೆ” ಎಂದು ಸತೀಶ್ ರಮೇಸ್ ವಿರುದ್ಧ ಹರಿಹಾಯ್ದರು.
“ಮೊದಲು ಕೆ.ಎಚ್.ಪಾಟೀಲ್ ಇವನಿಗೆ ಟಿಕೆಟ್ ಕೊಟ್ಟವರು. ಅವರ ಬಗ್ಗೆ ಹೊಗಳುತ್ತಿದ್ದ. ನಂತರ ಎಸ್.ಎಂ.ಕೃಷ್ಣ ಆಯಿತು, ಸಿದ್ದರಾಮಯ್ಯ ಆಯಿತು. ನಾಳೆ ಯಾರಾಗುತ್ತಾರೋ ಗೊತ್ತಿಲ್ಲ. 2-3 ವರ್ಷದ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಹೊರಟಿದ್ದರು. ನನ್ನ ಹೆಸರನ್ನೂ ಸಿಎಂ ಎಂದು ಬಿಂಬಿಸಿದ್ದರು” ಎಂದು ಸತೀಶ್ ಹೇಳಿದರು.
“ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಲು ಅವನೇ ಲಾಬಿ ಮಾಡಿದವನು. ಈತ ಹೇಳಿದ ಎಂದು ಮಾಡಿದೆವು. ಎಲ್ಲರನ್ನೂ ಮ್ಯಾನೇಜ್ ಮಾಡಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಎತ್ತಿ ಕಟ್ಟಿದ. ಈಗ ಸುಳ್ಳು ಹೇಳುತ್ತಿದ್ದಾನೆ. ಸುಳ್ಳು ಹೇಳುವುದರಲ್ಲಿ ಪಿಎಚ್ ಡಿ ಮಾಡಿದ್ದಾನೆ” ಎಂದು ಕಿಡಿಕಾರಿದರು.
“ಆತ ಮೊದಲು ನಮ್ಮ ಪಕ್ಷದಲ್ಲೇ ಇದ್ದ. ಅವನ ವಿರುದ್ಧ ಮಾತನಾಡಲು ನಿರ್ಬಂಧಗಳಿದ್ದವು. ಈಗ ಪಕ್ಷ ಬೇರೆ. ಬೇಕಾದಂಗೆ ಮಾತಾಡಬಹುದು. ಲಖನ್ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ರಮೇಶ್ ಹೇಳುತ್ತಿದ್ದಾನೆ. ಲಖನ್ ಪಾರ್ಟಿ ಬಿಟ್ಟಿಲ್ಲ, ಬೆನ್ನಿಗೆ ಚೂರಿ ಹೇಗಾಗುತ್ತದೆ? ಲಖನ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದರೆ ಬೆನ್ನಿಗೆ ಚೂರಿ ಹಾಕಿದ ಎನ್ನಬಹುದಿತ್ತು. ಈಗ ಆತನೇ ಪಕ್ಷಕ್ಕೆ, ರಾಜ್ಯದ ಜನರಿಗೆ, ಜಿಲ್ಲೆಗೆ, ಮತದಾರರಿಗೆ ಮೋಸ ಮಾಡಿದ್ದಾನೆ” ಎಂದು ಸತೀಶ್ ಆರೋಪಿಸಿದರು.
“ಆತ ಹೇಳಿದಂತೆ ಕುಣಿದರೆ ನನ್ನ ತಮ್ಮ ಹಾಗೆ ಹೀಗೆ ಅಂತ ಹೊಗಳುತ್ತಾನೆ. ಆತ ತಿರುಪತಿ ಹಾಗೆ ಅರ್ಧ ತಲೆ ಬೋಳಿಸಿ ಹೋಗುತ್ತಾನೆ. 20 ವರ್ಷ ಲಖನ್ ನನ್ನು ಇಲ್ಲಿ ಅರ್ಧ ತಲೆ ಬೋಳಿಸಿ ಕೂಡ್ರಿಸಿದ್ದಾನೆ. ಲಖನ್ ಕಾಯುತ್ತ ಕುಳಿತಿದ್ದ. ಈಗ ಲಖನ್ ಗೆ ಗೊತ್ತಾಗಿದೆ” ಎಂದು ಹೇಳಿದರು.
“ಸುರೇಶ್ ಅಂಗಡಿ ಹಿಂದಿನಿಂದಲೂ ಗೋಕಾಕ ಬಿಹಾರದಂತಾಗಿದೆ ಎಂದು ಪದೇ ಪದೆ ಹೇಳುತ್ತಿದ್ದರು. ಈಗ ಅವನ ಪರ ಪ್ರಚಾರಕ್ಕೆ ಬರುತ್ತಾರಲ್ಲ, ಈಗ ಬಿಹಾರ, ಗೋಕಾಕ ಅದಲು ಬದಲಾಗಿದೆಯಾ ಕೇಳಬೇಕು” ಎಂದು ಸುರೇಶ ಅಂಗಡಿ ವಿರುದ್ಧವೂ ಸತೀಶ್ ಹರಿಹಾಯ್ದರು.
ಲಕ್ಷ್ಮಿ ಹೆಬ್ಬಾಳಕರ್ ಗೆ ಯಾವ ಸ್ಥಾನವನ್ನೂ ಕೊಡಬಾರದೆಂದು ಕಂಡೀಷನ್ ಹಾಕಿದ್ದೆ -ರಮೇಶ್ ಜಾರಕಿಹೊಳಿ
ಗೋಕಾಕ ರಾಜಕೀಯ ಇನ್ನಷ್ಟು ಕುತೂಹಲ: ತ್ರಿಕೋನ ಸ್ಪರ್ಧೆ ಫಿಕ್ಸ್?
ರಮೇಶ ಜಾರಕಿಹೊಳಿ ಅವರ ತ್ಯಾಗದಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ