Latest

ಬ್ಯಾಂಕ್ ಠೇವಣಿ- ಲಾಭದ ಇಳುವರಿ ಹೆಚ್ಚಿಸಿಕೊಳ್ಳುವುದು ಹೇಗೆ?

ಪ್ರಗತಿವಾಹಿನಿ ವಿಶೇಷ

ಕೆ .ಜಿ .ಕೃಪಾಲ್
ಷೇರುಪೇಟೆಯು ಹೆಚ್ಚಿನ ಅಸ್ಥಿರತೆಯಿಂದ ಕೂಡಿದೆ. ಷೇರಿನ ಬೆಲೆಗಳು ವಿನಾಕಾರಣ ಇಳಿಯುತ್ತವೆ, ಅಂತೆಯೇ ಏರಿಕೆಗೊಳಪಡುತ್ತವೆ. ಇಳಿಕೆ ಕಾಣುವಾಗ ರೂಪಾಯಿಯ ಬೆಲೆ ಕುಸಿತ, ಕಚ್ಚಾ ತೈಲಬೆಲೆ  ಏರಿಕೆ, ಅಂತರ ರಾಷ್ಟ್ರೀಯ ಪೇಟೆಗಳಲ್ಲಾಗುವ ಇಳಿಕೆ ಮುಂತಾದವುಗಳ ಕಾರಣವನ್ನು ನೀಡಲಾಗುವುದು.  ಷೇರಿನ ಬೆಲೆಗಳ  ಏರಿಳಿತಕ್ಕೆ ಕಂಪನಿಗಳು ಅಂತರ್ಗತವಾಗಿ  ಸಾಧಿಸಿದ ಅಂಶಗಳನ್ನು ಪರಿಗಣಿಸದೆ, ಕೇವಲ ಬಾಹ್ಯ ಬೆಳವಣಿಗೆಗಳಿಗೆ, ವಿತ್ತೀಯ ಸಂಸ್ಥೆಗಳು ನೀಡುವ ರೇಟಿಂಗ್ ಗಳನ್ನು ಆಧಾರಿಸಿ ಅಲಂಕಾರಿಕ ಶೈಲಿಯಲ್ಲಿ ವರ್ಣಿಸಲಾಗುವುದು.  ಇಂತಹ ವಾತಾವರಣವು ಪಾರಂಪರಿಕವಾಗಿ ಬೆಳೆದುಬಂದಿರುವ ದೀರ್ಘಕಾಲೀನ ಹೂಡಿಕೆಗೆ ಅಪವಾದವಾಗಿದೆ.  ಉದಾಹರಣೆಗೆ ಇಂದು ಹೀರೊ ಮೋಟೊಕಾರ್ಪ್ ನ್ನು ಸಂಸ್ಥೆಯೊಂದು ಕೆಳದರ್ಜೆಗೆ ಇಳಿಸಿದೆ ಎಂಬ ಕಾರಣಕ್ಕಾಗಿ ರೂ.170 ರಷ್ಟು ಕುಸಿದು ನಂತರ ಸ್ವಲ್ಪ ಚೇತರಿಕೆಯಿಂದ ರೂ.146 ರ ಹಾನಿಯಿಂದ ಕೊನೆಗೊಂಡಿದೆ.  ಈ ರೇಟಿಂಗ್ ಇಳಿಸುವಿಕೆಯು ಪ್ರಕಟವಾಗಿರುವುದು ಷೇರಿನ ಬೆಲೆ ರೂ.3,300 ರ ಗಡಿ ದಾಟಿದಾಗ. ಇದೇ ಷೇರಿನ ಬೆಲೆ ಒಂದು ತಿಂಗಳಲ್ಲಿ ರೂ.2,875 ರಿಂದ ರೂ.3,380 ರವರೆಗೂ ಏರಿಕೆ ಕಂಡಿದೆ. ಅಂದರೆ ಏರಿಕೆ ಕಂಡಾಗ ಲಾಭ ನಗಧೀಕರಣ,  ಇಳಿಕೆ ಕಂಡಾಗ  ಶೇಖರಣಾ ವಿಧಾನವೊಂದೇ ಇಂದಿನ ವಹಿವಾಟಿಗೆ ಮಾರ್ಗದರ್ಶನ.  
ಷೇರುಪೇಟೆಯ ಈ ರೀತಿಯ ಅಸಹಜ ನಡೆ ಬಹಳಷ್ಟು ಹೂಡಿಕೆದಾರರನ್ನು ದೂರತಳ್ಳಿರಬಹುದು.  ಹೆಚ್ಚಿನವರು ಸುರಕ್ಷತಾ ಕಾರಣಕ್ಕಾಗಿ ಬ್ಯಾಂಕ್ ಡಿಪಾಜಿಟ್ಟುಗಳನ್ನಾಶ್ರಯಿಸಿರಬಹುದು. ಬ್ಯಾಂಕ್ ಗಳು ಸಹ ಸಂಪನ್ಮೂಲ ಕೊರತೆಯಿಂದ  ಬಳಲುತ್ತಿವೆ.  ಕಾರ್ಪೊರೇಟ್ ವಲಯವು ಸಹ ಸಂಪನ್ಮೂಲ ಕೊರತೆಯಿಂದ ಹೆಚ್ಚಿನ ಕಂಪನಿಗಳು ವಿವಿಧ ರೀತಿಯ ಯೋಜನೆಗಳಿಂದ, ವಿವಿಧ ಮೂಲಗಳಿಂದ ಹಣ ಸಂಗ್ರಹಣಾ ಕಾರ್ಯವನ್ನು ಚುರುಕುಗೊಳಿಸಿವೆ.   ಸಾರ್ವಜನಿಕ ವಲಯದ  ಬ್ಯಾಂಕ್ ಗಳ ಅಗತ್ಯವನ್ನು ನೀಗಿಸಲು ಕೇಂದ್ರ ಸರ್ಕಾರವು ರೂ.81 ಸಾವಿರ ಕೋಟಿ ಬಂಡವಾಳವಾಗಿ  ಹಣ ಒದಗಿಸುವುದಾಗಿ ಹೇಳಿದೆ.  ಕೇಂದ್ರ ಸರ್ಕಾರವು ಸಹ ತನ್ನ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ.  ಅಲ್ಲದೆ ಬಂಡವಾಳ ಹಿಂತೆಗೆತದ ನೆಪದಲ್ಲಿ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿರುವ ಮೀಸಲು ನಿಧಿಯ ಮೇಲೆ ಗಮನಹರಿಸಿ, ಆ ನಿಧಿಯನ್ನು ಕಂಪನಿಗಳ ವಿಲೀನ, ಸ್ವಾಧೀನ, ಭಾಗಿತ್ವ ಖರೀದಿ ಮುಂತಾದವುಗಳಿಗೆ ವಿನಿಯೋಗಿಸುವ ಮೂಲಕ ತನ್ನ ಗುರಿಯನ್ನು ತಲುಪುತ್ತಿದೆ.  ಇದು ಹೂಡಿಕೆದಾರರ ಹಿತದಿಂದ ಸರಿಯಲ್ಲ.  ಹೀಗಿರುವಾಗ ನಾವು, ಸಣ್ಣ ಹೂಡಿಕೆದಾರರು ನಮ್ಮಲ್ಲಿರುವ ಸಂಪನ್ಮೂಲವನ್ನು ಕರಗಿಸಿಕೊಳ್ಳದೆ, ಸಾಧ್ಯವಾದಷ್ಟು ಸುರಕ್ಷತೆಯಿಂದ ಉಳಿಸಿ ಬೆಳೆಸುವ ಮೂಲಕ ಆರ್ಥಿಕ ಸಾಕ್ಷರತೆಯನ್ನು ಗಳಿಸಬೇಕಾಗಿದೆ.  
ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆ ಎಂದರೆ ಬ್ಯಾಂಕ್ ಡಿಪಾಜಿಟ್ಟುಗಳು ಎಂಬ ಕಲ್ಪನೆ ಎಲ್ಲರಲ್ಲೂ ಬೇರೂರಿದೆ.   ಆದರೆ ಬ್ಯಾಂಕ್ ಗಳಲ್ಲಿ ಕೇವಲ ರೂ.ಒಂದು ಲಕ್ಷದವರೆಗೆ ಮಾತ್ರ ವಿಮೆಯ ಸುರಕ್ಷತೆ ಇರುತ್ತದೆ. ಹೆಚ್ಚಿನದಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಆದರೂ ನಾವು ಸರತಿಯಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುತ್ತೇವೆ. ಇದಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ನಂಬಿಕೆ ಕಾರಣವಾಗಿದೆ.    ಹೀಗಿರುವಾಗ ಬ್ಯಾಂಕ್ ಗಳು ತಮ್ಮ ಠೇವಣಿದಾರರಿಗೆ ಸುಮಾರು ಶೇ.7 ರಿಂದ ಶೇ.8 ರವರೆಗೂ ವಾರ್ಷಿಕ ಬಡ್ಡಿ ನೀಡುತ್ತವೆ. ಇದೇ ಬ್ಯಾಂಕ್ ಗಳಲ್ಲಿ ಹಲವಾರು ಬ್ಯಾಂಕ್ ಗಳು ತಮ್ಮ ಬೆಸಲ್ 3 ರ ನಿಯಮಾನುಸಾರ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಡ್ಡಿ ನೀಡುವ ಸಾಲಪತ್ರಗಳನ್ನು ವಿತರಿಸಿವೆ, ವಿತರಿಸುತ್ತಿವೆ.  ಇತ್ತೀಚಿಗೆ ಕರ್ನಾಟಕ ಬ್ಯಾಂಕ್  ಶೇ.12 ರಂತೆ ಬಡ್ಡಿ  ನೀಡುವ ಏನ್ ಸಿ ಡಿ ಗಳನ್ನು ,  ಇಂಡಿಯನ್ ಓವರ್ಸಿಸ್ ಬ್ಯಾಂಕ್  ಶೇ.11.7 ಬಡ್ಡಿ ನೀಡುವ ಟೈರ್ 2 ಬಾಂಡ್ ಗಳನ್ನು ವಿತರಿಸಿವೆ.  ಈ ರೀತಿಯ ಬ್ಯಾಂಕ್ ಬಾಂಡ್ ಗಳು ಪೇಟೆಯಲ್ಲಿ ಸ್ವಲ್ಪ ಪ್ರೀಮಿಯಂ ನಲ್ಲಿ ಲಭ್ಯವಿರುತ್ತವೆ.  ಬ್ಯಾಂಕ್ ಗಳಲ್ಲಿ ಠೇವಣಿ  ಇಟ್ಟು ಕಡಿಮೆ ಬಡ್ಡಿ ಪಡೆಯುವುದಕ್ಕಿಂತ ಅದೇ ಬ್ಯಾಂಕ್ ಗಳು ವಿತರಿಸಿರುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದು.  ತುಲಾತ್ಮಕವಾಗಿ ಅಡಕವಾಗಿರುವ ವಿವಿಧ ಅಂಶಗಳನ್ನು ಪರಿಗಣಿಸಿ ನಿರ್ಧರಿಸುವ ಆರ್ಥಿಕ ಸಾಕ್ಷರತಾ ಮಟ್ಟ ಬೆಳೆಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ.
   
(ಲೇಖಕರು ಆರ್ಥಿಕ ಅಂಕಣಕಾರರು, ಬೆಂಗಳೂರು, Mob: 98863 13380)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button