ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯ ದಾಂಡೇಲಿ ಹಾಗೂ ಭೀಮಗಡ ಅಭಯಾರಣ್ಯಗಳ ಮೂಲಕ ಹಾದುಹೋಗುವ ಖಾನಾಪುರ–ಹೆಮ್ಮಡಗಾ–ಅನಮೋಡ ರಸ್ತೆಯಲ್ಲಿ ರಾತ್ರಿ 9ರವರೆಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿರುವ ಗೋವಾ ಸರ್ಕಾರದ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಬಾರದೆಂದು ವನ್ಯಜೀವಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾಗಿರುವ ಎಸ್ ಎಸ್ ನಕುಲ್ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಾಗಿರುವ ಡಾ ಎಸ್ ಬಿ ಬೊಮ್ಮನಹಳ್ಳಿ ಅವರಿಗೆ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಮನವಿ ಮಾಡಿದ್ದಾರೆ.
ಏನಿದು ವಿವಾದ:
ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಸಂಪರ್ಕಿಸುವ ಬೆಳಗಾವಿ- ಖಾನಾಪುರ- ಲೋಂಡಾ- ಅನಮೋಡ್ ರಾಷ್ಟ್ರೀಯ ಹೆದ್ದಾರಿ 4ಎ ಅಗಲೀಕರಣ ನಡೆಯುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಈ ಭಾಗದಲ್ಲಿ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ಖಾನಾಪುರ ಮೂಲಕ ಅನಮೋಡ್ ತಲುಪಲು ದಾಂಡೇಲಿ ಹಾಗೂ ಭೀಮಗಡ ಅಭಯಾರಣ್ಯಗಳ ಮೂಲಕ ಹಾದುಹೋಗುವ ಖಾನಾಪುರ–ಹೆಮ್ಮಡಗಾ–ಅನಮೋಡ ರಾಜ್ಯ ಹೆದ್ದಾರಿ 30 ಇದೆ. ಆದರೆ ಈ ರಸ್ತೆಯಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಿರುವ ಕಾರಣ 2015 ರಲ್ಲಿ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯ ತನಕ ವಾಹನ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ.
ಈಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಖಾನಾಪುರ–ಹೆಮ್ಮಡಗಾ–ಅನಮೋಡ ಹೆದ್ದಾರಿಯಲ್ಲಿ ರಾತ್ರಿ ವೇಳೆ ಮೂರು ಗಂಟೆಗಳ ಕಾಲ ಸಂಚಾರ ನಿಷೇಧ ಸಡಿಲಿಸಿ ಅಂದರೆ ರಾತ್ರಿ 9 ಗಂಟೆಯ ತನಕ ವಾಹನಗಳು ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಗೋವಾ ರಾಜ್ಯದ ಲೋಕೋಪಯೋಗಿ ಸಚಿವರು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಎಚ್ ಡಿ ರೇವಣ್ಣ ಅವರನ್ನು ಡಿಸೆಂಬರ್ 24 ರಂದು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ಗೋವಾ ಸರಕಾರದ ಮನವಿಗೆ ಯಾವುದೇ ಕಾರಣಕ್ಕೂ ಒಪ್ಪಬಾರದೆಂದು ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಗೋವಾ ರಾಜ್ಯವನ್ನು ಸಂಪರ್ಕಿಸಲು ಈಗಾಗಲೇ ಜತ್ತ- ಜಾಂಬೋಟಿ- ಚೋರ್ಲಾ ರಾಜ್ಯ ಹೆದ್ದಾರಿ ಹಾಗೂ ಬೆಳಗಾವಿ- ಅಂಬೋಲಿ ಮೂಲಕ ಇನ್ನೊಂದು ಬದಲಿ ಮಾರ್ಗವಿದ್ದು ಪ್ರಯಾಣಿಕರು ಇವೆರಡೂ ರಸ್ತೆಗಳನ್ನು ಯಾವುದೇ ತೊಂದರೆಯಿಲ್ಲದೆ ಬಳಸಬಹುದು. ಅಲ್ಲದೇ ರಾತ್ರಿ ಸಂಚಾರ ನಿಷೇಧ ಹೇರಿದಾಗಿನಿಂದ ವನ್ಯಜೀವಿಗಳು ಈ ಪರಿಸ್ಥಿತಿಗೆ ಒಗ್ಗಿವೆ. ಇಂತಹ ಸಂದರ್ಭದಲ್ಲಿ ಸಮಯ ಬದಲಾವಣೆ ಮಾಡಿದರೆ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೇ ವಾಹನ ಅಪಘಾತಗಳಲ್ಲಿ ವನ್ಯಜೀವಿಗಳು ಮೃತಪಡುವ ಅಥವಾ ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿರತೆ, ಕಡವೆ, ಜಿಂಕೆ, ಕಾಟಿ, ಕಾಳಿಂಗಸರ್ಪ, ಹೂಬಾಲ, ಕಬ್ಬೆಕ್ಕು, ಚಿರತೆಬೆಕ್ಕು, ನರಿ ಸೇರಿದಂತೆ ಇನ್ನೂ ಹಲವು ವನ್ಯಜೀವಿಗಳು ವಾಹನ ಅಪಘಾತಗಳಲ್ಲಿ ಮೃತಪಟ್ಟಿವೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬೇಕೆಂದು ಕೇರಳ ಸರಕಾರ ರಾಜ್ಯವನ್ನು ಒತ್ತಾಯಿಸುತ್ತಲೇ ಇದೆ. ಆದರೆ ಮುಖ್ಯಮಂತ್ರಿಗಳೇ ವನ್ಯಜೀವಿಗಳ ಹಿತದೃಷ್ಟಿಯಿಂದ ಸಂರಕ್ಷಿತ ಪ್ರದೇಶಗಳಲ್ಲಿ ರಾತ್ರಿ ಸಂಚಾರ ನಿಷೇಧ ಸೂಕ್ತವೆಂದು ಅಭಿಪ್ರಾಯಪಟ್ಟಿದ್ದರು ಹಾಗೂ ತಮ್ಮ ಸರಕಾರ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ದೃಢ ನಿಲುವು ತಳೆದಿದ್ದಾರೆ. ಆದ್ದರಿಂದ ಈ ವಿಷಯದಲ್ಲೂ ರಾಜ್ಯ ಸರಕಾರ ರಾತ್ರಿ ಸಂಚಾರ ನಿಷೇಧಕ್ಕೆ ಬದ್ಧರಾಗಿರಬೇಕೆಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ