ಸಂತೋಷಕುಮಾರ ಕಾಮತ, ಮಾಂಜರಿ – ಪ್ರಸಕ್ತ ಸಾಲಿನ ಭೀಕರ ಪ್ರವಾಹ ಮತ್ತುಅಬ್ಬರದ ಮಳೆಯಿಂದಾಗಿ ಮೇವಿನ ಸಮಸ್ಯೆ ಭಾರಿ ಪ್ರಮಾಣದಲ್ಲಿ ತಲೆದೋರಿದ್ದು, ಹೈನುಗಾರಿಕೆ ಮೇಲೆ ವಿಪರೀತ ಪರಿಣಾಮ ಬಿರಿದೆ. ಇದರಿಂದಾಗಿ ಶೇ ೫೦ ರಷ್ಟು ಹಾಲು ಉತ್ಪಾದನೆ ಕುಸಿದಿದ್ದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೀಡಾಗಿದ್ದಾರೆ.
ಜಮೀನುಗಳಲ್ಲಿದ್ದ ಮೇವು ಮಹಾಪೂರದಲ್ಲಿಕೊಚ್ಚಿ ಹೋಗಿದೆ. ಶೇ ೫೦ ರಷ್ಟುಕಬ್ಬಿನ ಬೆಳೆ ನಾಶವಾಗಿದೆ, ನದಿ ತೀರದ ಹುಲ್ಲಿನ ಗದ್ದೆಗಳು ಸಂಪುರ್ಣ ನಾಶವಾಗಿದೆ. ಹೀಗಾಗಿ ಜಾನುವಾರ ಹೊಟ್ಟೆತುಂಬಿಸುವುದೆ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚಿಗಷ್ಟೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು ಕಬ್ಬು ಕಟಾವು ಮಾಡುತ್ತಿರುವ ಕಬ್ಬಿನ ಗದ್ದೆಗಳಿಗೆ ತೆರಳಿ ಮೇವು ಸಂಗ್ರಹಿಸುವ ಪ್ರಸಂಗ ಬಂದೊದಗಿದೆ.
ನದಿ ತೀರದ ಪ್ರತಿಯೊಂದು ಗ್ರಾಮದ ರೈತರು ಒಕ್ಕಲುತನದ ಜೊತೆಗೆ ಹೈನುಗಾರಿಕಾ ಉದ್ಯಮ ಮಾಡುತ್ತಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಬಂದ ಪ್ರವಾಹದಿಂದಾಗಿ ಜಾನುವಾರುಗಳ ಪರಿಸ್ಥಿತಿಯನ್ನು ನೋಡಿ ಎಮ್ಮೆಗಳನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮೇವು ಕೊರತೆಯಿಂದ ಎಮ್ಮೆಗಳು ಕಡಿಮೆ ಹಾಲು ಹಿಂಡುತ್ತಿವೆ. ಇದರಿಂದಾಗಿ ರೈತರ ಆರ್ಥಿಕ ಪರಿಸ್ಥಿತಿ ಮೇಲೂ ವಿಪರೀತ ಪರಿಣಾಮ ಬಿರಿದೆ.
೫-೬ ಲೀಟರ್ ಹಾಲು ಹಿಂಡುತ್ತಿರುವ ಎಮ್ಮೆಗಳು ಇಂದು ಸಮರ್ಪಕ ಆಹಾರ ಸಿಗದ ಕಾರಣ ೨-೩ ಲೀಟರ್ ಹಾಲು ಹಿಂಡಿತ್ತಿವೆ. ಅಲ್ಲದೆ ಹವಾಮಾನ ವೈಪರೀತ್ಯವೂ ಎಮ್ಮೆಗಳನ್ನು ಕಾಡುತ್ತಿದೆ. ಕಾಯಿಲೆಗಳೂ ಸಹ ಹೆಚ್ಚುತ್ತಿವೆ. ಇದರಿಂದಾಗಿ ಹಾಲು ಕಡಿಮೆ ನೀಡುತ್ತಿದ್ದು, ಡೇರಿಗೆ ತುಂಬುವ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಗೌಳಿಗಳು ಸಹ ರೈತರ ಮನೆಮನೆಗೆ ತೆರಳಿ ಹಾಲು ಸಂಗ್ರಹಿಸುವ ಪ್ರಸಂಗ ಬಂದೊದಗಿದೆ.
ಒಂದು ಕಾಲದಲ್ಲಿ ರೈತರು ಡೇರಿಗಳಿಗೆ ಬಂದು ಹಾಲು ಕೊಡುತ್ತಿದ್ದರು. ಆದರೆ ಇಂದು ಉಲ್ಟಾ ಆಗಿದೆ. ಗೌಳಿಗಳೆ ರೈತರ ಮನೆಗೆ ಹೋಗಿ ಹಾಲು ಸಂಗ್ರಹಿಸುವ ಪ್ರಸಂಗ ಬಂದೂದಗಿದೆ. ಕಳೆದ ೫ ತಿಂಗಳಿಂದ ರೈತರು ಹಾಲನ್ನು ಕಡಿಮೆ ಪ್ರಮಾಣದಲ್ಲಿ ನಮ್ಮ ಡೇರಿಗೆ ಹಾಕುತ್ತಿದ್ದು, ಮೇವು ಕೊರತೆ ರೈತರನ್ನು ಕಾಡುತ್ತಿರುವುದರಿಂದ ಹಾಲು ಉತ್ಪಾದನೆ ಶೇ ೫೦ ರಷ್ಟು ಕುಸಿದಿದೆ ಎನ್ನುತ್ತಾರೆ ಹಾಲು ಸಂಕಲನ ಮಾಡುವ ಮಾಲಿಕರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ