Politics

*ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ಡಿಸಿ, ಸಿಇಒಗಳ ಸಭೆಯಲ್ಲಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

*ಯುವನಿಧಿ ಫಲಾನುಭವಿ ನಿರುದ್ಯೋಗಿಗಳಿಗೆ ಉದ್ಯೋಗ, ತರಬೇತಿ ಸಿಗಬೇಕು. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತರಬೇತಿ ನೀಡಿ, ಉದ್ಯೋಗ ಕೈಗೆ ಸಿಗುವಂತಾಗಬೇಕು. ತರಬೇತಿ ಪಡೆದವರೆಲ್ಲರಿಗೂ ಉದ್ಯೋಗ ಸಿಗದೇ ಹೋಗಬಹುದು. ಆದರೆ ತರಬೇತಿ ಮಾತ್ರ ಹೆಚ್ಚೆಚ್ಚು ನಿರುದ್ಯೋಗಿ ಮತ್ತು ಯುವನಿಧಿ ಫಲಾನುಭವಿಗಳಿಗೆ ನೀಡಬೇಕು ಎಂದು ಸಿಎಂ ಸೂಚನೆ ನೀಡಿದರು.

*ಜಿಲ್ಲಾಧಿಕಾರಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು, ಆ ಡೈರಿಯಲ್ಲಿ ಫೀಲ್ಡ್‌ ವರ್ಕ್‌ ಅನುಭವಗಳು, ಸಮಸ್ಯೆಗಳು, ಪರಿಹಾರ ಎಲ್ಲದರ ಬಗ್ಗೆಯೂ ಉಲ್ಲೇಖವಿರಬೇಕು ಎಂದು ಕಳೆದ ವರ್ಷದ ಸಭೆಯಲ್ಲಿ ಮತ್ತು ಎಲ್ಲಾ ಕೆಡಿಪಿ ಸಭೆಗಳಲ್ಲಿ ನಾನು ಸೂಚನೆ ನೀಡಿದ್ದೆ. ಇನ್ನೂ ಕೆಲವರು ಸಮರ್ಪವಾಗಿ ಡೈರಿಗಳನ್ನು ಬರೆದಿಲ್ಲ ಎನ್ನುವ ಮಾಹಿತಿ ಇದೆ. ನೀವು ಬರೆದ ಡೈರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬಂದರೆ ನಾನೂ ಗಮನಿಸಬಹುದು ಎಂದು ಸೂಚನೆ ನೀಡಿದರು.

*ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸುವುದು ಮತ್ತು ಅನಗತ್ಯ ತೊಂದರೆ ಕೊಡುವ ಬಗ್ಗೆ ವರದಿಗಳು, ದೂರುಗಳು ಬಂದಿವೆ. ಇದನ್ನು ನಿಲ್ಲಿಸಬೇಕು. ಕುರಿಗಳು ತಲೆ ಎತ್ತಿ ಮೇಯುವುದಿಲ್ಲ. ಅವು ತಲೆ ಬಗ್ಗಿಸಿಕೊಂಡು ಮೇಯುವುದರಿಂದ ಅರಣ್ಯ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಕುರಿಗಾಹಿಗಳಿಗೆ ತೊಂದರೆ ಆಗುತ್ತಿದೆ ಇದನ್ನು ತಪ್ಪಿಸಿ ಎಂದರು.

Home add -Advt

*ನೀವೆಲ್ಲಾ ಯುವ ಜಿಲ್ಲಾಧಿಕಾರಿಗಳಿದ್ದೀರಿ. ನಿಮಗೆ ಫೀಲ್ಡ್‌ ಎಕ್ಸ್‌ಪೀರಿಯನ್ಸ್‌ ಚನ್ನಾಗಿ ಇರುತ್ತದೆ. ನೀವು ಕೆಲಸ ಮಾಡುವ ಜಿಲ್ಲೆಗಳಲ್ಲಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗುವ ದಿಕ್ಕಿನಲ್ಲಿ ಇನ್ನೋವೇಟೀವ್‌ ಆಗಿ ಕೆಲಸ ಮಾಡಿ ತೋರಿಸಿ. ನಿಮ್ಮ ಹೆಸರು ಜಿಲ್ಲೆಗಳಲ್ಲಿ, ರಾಜ್ಯದಲ್ಲಿ ಅಚ್ಚಳಿಯದೆ ಉಳಿಯುವ ರೀತಿಯಲ್ಲಿ ದಾಖಲೆ ಮಾಡಿ ತೋರಿಸಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಹುರಿದುಂಬಿಸಿದರು.

*ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ ಕೊಡಬೇಕು ಎಂದು ಸೂಚಿಸಿದ್ದೆ. ಇದಿನ್ನೂ ಕೆಲವು ಕಡೆ ಜಾರಿಗೆ ಬಂದಿಲ್ಲ. ಕುರಿಗಳ್ಳರು ಕುರಿಗಳನ್ನು ಕದಿಯುವ ಜೊತೆಗೆ, ಕುರಿಗಾಹಿಗಳನ್ನು ಕೊಲೆ ಮಾಡಿರುವ ಘಟನೆಗಳೂ ಕೂಡ ನಡೆದಿವೆ. ಹೀಗಾಗಿ ಬಂದೂಕು ಪರವಾನಗಿ ಕೊಡುವುದನ್ನು ಸಮರ್ಪಗೊಳಿಸಬೇಕು ಎನ್ನುವ ಸೂಚನೆ ನೀಡಿದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ಕುರಿಗಾಹಿಗಳಿಗೆ ಬಂದೂಕು ನೀಡುವ ಕಾರ್ಯದ ಬಗ್ಗೆ ನಿಗಾ ಇಡಲು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸುವುದಾಗಿ ತಿಳಿಸಿದರು.

•ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಜಿಂಕೆಗಳಿಂದ ರೈತರ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

• ರಾಜ್ಯದಲ್ಲಿ 15,16,731 ಎಕ್ರೆ ಅರಣ್ಯೀಕರಣಕ್ಕೆ ಜಮೀನು ಲಭ್ಯವಿದೆ. 8.5 ಕೋಟಿ ಸಸಿಗಳನ್ನು ಕಳೆದ ಎರಡು ವರ್ಷಗಳಲ್ಲಿ ನೆಡಲಾಗಿದೆ. ಪ್ರತಿ ವರ್ಷ ಎಷ್ಟು ಎಕ್ರೆ ಅರಣ್ಯೀಕರಣವಾಗಿದೆ? ಕಳೆದ 10ವರ್ಷಗಳಲ್ಲಿ ಎಷ್ಟು ಎಕ್ರೆ ಅರಣ್ಯೀಕರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಬೇಕು.

*ಅರಣ್ಯೀಕರಣಕ್ಕೆ ಲಭ್ಯವಿರುವ ಜಮೀನಿನಲ್ಲಿ ಸಂಪೂರ್ಣ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು.

• ಆನೆ ಮತ್ತು ಮಾನವ ಸಂಘರ್ಷ ತಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು. ಆನೆ ಕಾರ್ಯಪಡೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಆನೆಗಳಿಗೆ ಸರಿಯಾದ ಆಹಾರ ಕಾಡಿನಲ್ಲೇ ಲಭ್ಯವಾಗುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ಲಂಟಾನಾ ಕಳೆಗಳನ್ನು ತೆಗೆಯುವ ಕೆಲಸವಾಗಬೇಕು. ಇದೇ ರೀತಿ ಕುಡಿಯುವ ನೀರಿನ ಲಭ್ಯತೆಯೂ ಕಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.

• ಸಣ್ಣ ನೀರಾವರಿ ಇಲಾಖೆ ಕೆರೆಗಳಲ್ಲಿ ಮೀನು ಸಾಕಣೆ ಮತ್ತು ಹರಾಜು ಪ್ರಕ್ರಿಯೆಯನ್ನು ಇ ಟೆಂಡರ್ ಮೂಲಕ ನಿರ್ವಹಿಸಬೇಕು. ಕೆರೆಗಳ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇದು ಆದಾಯದ ಮೂಲವೂ ಆಗುತ್ತದೆ.

Related Articles

Back to top button