ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಸಲುವಾಗಿ ಕಳೆದ 4 ದಿನದಿಂದ ನಡೆಯುತ್ತಿದ್ದ ಕಸರತ್ತು ದೆಹಲಿಗೆ ಶಿಫ್ಟ್ ಆಗಿದೆ.
ಬುಧವಾರ ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಬಿಕ್ಕಟ್ಟು ಬಗೆಹರಿಯದ್ದರಿಂದ ಅವರು ನವದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಮುಂದೆ ವಾಸ್ತವ ಸ್ಥಿತಿಯನ್ನಿಟ್ಟು, ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
2-3 ಪ್ರಬಲ ಖಾತೆಗಳನನಿಟ್ಟಿಕೊಂಡಿರುವ ಪ್ರಭಾವಿ ಸಚಿವರು ಯಾವುದೇ ಖಾತೆಯನ್ನು ಬಿಟ್ಟುಕೊಡಲು ಒಪ್ಪದಿರುವುದು ಮತ್ತು ಹೊಸದಾಗಿ ಸೇರ್ಪಡೆಗೊಂಡಿರುವ ಪ್ರಬಲ ಸಚಿವರು ಪ್ರಭಾವಿ ಖಾತೆಗಳನ್ನೇ ಕೇಳುತ್ತಿರುವುದು ಬಿಕ್ಕಟ್ಟಿಗೆ ಕಾರಣ.
ಒಂದು ಹಂತದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ ಮಧ್ಯೆ ವೇಣುಗೋಪಾಲ ಸಮ್ಮುಖದಲ್ಲೇ ವಾಗ್ವಾದ ನಡೆಯಿತೆನ್ನಲಾಗಿದೆ. ಪರಮೇಶ್ವರ ಬಳಿ ಇರುವ ಗೃಹ ಅಥವಾ ಜಲಸಂಪನ್ಮೂಲ ಖಾತೆಯನ್ನು ಬಿಟ್ಟುಕೊಂಡುವಂತೆ ಸಿದ್ದರಾಮಯ್ಯ ಕೇಳಿದಾಗ ಪರಮೇಶ್ವರ ಕೆಂಡಾಮಂಡಲರಾದರೆನ್ನಲಾಗಿದೆ.
ಹೈಕಮಾಂಡ್ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಮುಖ್ಯಮಂತ್ರಿಗಳು ಅದಕ್ಕೆ ಸಹಿ ಹಾಕಿ ರಾಜ್ಯಪಾಲರಿಗೆ ರವಾನಿಸಬೇಕಿದೆ. ಒಟ್ಟಾರೆ ಕಾಂಗ್ರೆಸ್ ತನ್ನ ಪಾಲಿಗೆ ಬಂದಿರುವ ಖಾತೆಗಳನ್ನು ಸರಿಯಾಗಿ ಹಂಚಿಕೆ ಮಾಡಲು ತಿಣಕಾಟ ನಡೆಸುತ್ತಿದ್ದು, ಸಂಪುಟ ವಿಸ್ತರಣೆ ಮುಗಿದರೂ ಗೊಂದಲ ಮಾತ್ರ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ