*ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಹೆಚ್ಚಿಸುವಂತೆ ಕ್ರಮ ವಹಿಸಲು ಸಚಿವ ಮಧು ಬಂಗಾರಪ್ಪ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿಗಳ ನಿರ್ದೇಶನದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಹೆಚ್ಚಾಗಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳು ನಿರ್ವಹಿಸುವದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು.
ಸುವರ್ಣ ವಿಧಾನ ಸೌಧದ ಸಭಾಂಗಣದಲ್ಲಿ ಮಂಗಳವಾರ (ಜು.08) ನಡೆದ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು.ಈ ಕಾರ್ಯಕ್ಕೆ ಇಲಾಖೆ ವತಿಯಿಂದ ಮನೆ ಮನೆಗೆ ಭೇಟಿ ನೀಡಿ “ಶಾಲೆಗೆ ಬಾ” ಎಂಬ ಅಭಿಯಾನ ಹಮ್ಮಿಕೊಳ್ಳಬೇಕು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಊಟ, ಪುಸ್ತಕ ಸೇರಿದಂತೆ ಅಗತ್ಯ ಸೌಕರ್ಯ ನೀಡಲಾಗುತ್ತಿದೆ. ಇನ್ನು ಜುಲೈ 30 ರವರೆಗೆ ಶಾಲಾ ಪ್ರವೇಶಕ್ಕೆ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಗೋಕಾಕ ಹಾಗೂ ರಾಯಬಾಗ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಬಹಳ ಕಡಿಮೆಯಿದೆ. ಪ್ರತಿ ವರ್ಷ ಮಕ್ಕಳ ದಾಖಲಾತಿಯ ಅಂಕಿ ಅಂಶಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನಿರಂತರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಕಳೆದ ವರ್ಷಕ್ಕಿಂದ ಹೆಚ್ಚು ಮಕ್ಕಳು ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಮಕ್ಕಳು ಉತ್ತೀರ್ಣರಾಗಿದ್ದಾರೆ. ಇದೇ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದರು.
ಜಿಲ್ಲೆಯಲ್ಲಿ ಕಲಿಕೆಯಿಂದ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅಂತಹ ಮಕ್ಕಳನ್ನು ಕಲಿಕೆಯಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಅಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಹೆಚ್ವಿನ ಜವಾಬ್ದಾರಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ “ಓದು ಕರ್ನಾಟಕ” ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರದಿಂದ ಈಗಾಗಲೇ ನಿರ್ದೇಶನ ನೀಡಲಾಗಿದೆ.
ಪ್ರತಿ ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಗತ್ಯ. ಅದೇ ರೀತಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಕೂಡ ಕಡ್ಡಾಯವಾಗಿದೆ ಎಂದು ಸೂಚಿಸಿದರು.
ಇಲಾಖೆಯಿಂದ ಬಿಡುಗಡೆ ಆಗುವಂತಹ ಅನುದಾನವನ್ನು ಸಮರ್ಪಕವಾಗಿ ಬಳಕೆ ಆಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲಾಗುವ ಶೂ ಹಾಗೂ ಸಾಕ್ಸ್ ಗುಣಮಟ್ಟದಿಂದ ಕೂಡಿರಬೇಕು. ಜುಲೈ ಅಂತ್ಯದೊಳಗಾಗಿ ಎಲ್ಲ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸಕ್ತಗಳು ವಿತರಿಸಬೇಕು. ಶಿಕ್ಷಣ ಇಲಾಖೆಯಿಂದ ಜಾರಿಯಾಗುವಂತಹ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.
ಮಳೆಗಾಲ ಇರುವುದರಿಂದ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಗುರುಸಿ ಇಲಾಖೆಯ ಗಮನಕ್ಕೆ ತರಬೇಕು.
ಒಂದು ವೇಳೆ ಅಂತಹ ಶಾಲೆಗಳು ಕಂಡು ಬಂದಲ್ಲಿ ಅಂತಹ ಶಾಲೆಗಳಲ್ಲಿ, ಕೊಠಡಿಗಳಲ್ಲಿ ಕಲಿಕಾ ಪ್ರಕ್ರಿಯೆ ಮುಂದುವರೆಸಬಾರದು ಎಂದು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಲಿ ಇರುವ ಅತಿಥಿ ಶಿಕ್ಷರನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗಿದೆ. ಸದ್ಯದಲ್ಲಿ ಬೋಧನಾ ಸಿಬ್ಬಂದಿಗಳ ಕೊರತೆ ಇಲ್ಲ ಎಂದು ಶಾಲಾ ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ ಅವರು ವಿವರಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಅವರ ನಿರ್ದೇಶನದಂತೆ ಪ್ರತಿ ಶಾಲೆ ಭೇಟಿ ನೀಡಿ ಶಾಲಾ ಕಟ್ಟಡದ ಮಾಹಿತಿ ಪಡೆಯಲಾಗುತ್ತಿದೆ ಅಂತಹ ಕಟ್ಟಡಗಳು ಕಂಡು ಬಂದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಡಿ ಕಟ್ಟಡ, ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಡಿಡಿಪಿಐ ಹೇಳಿದರು.
ಬೈಲಹೊಂಗಲ ವಿಧಾನಸಭಾ ಶಾಸಕರಾದ ಮಹಾಂತೇಶ ಕೌಜಲಗಿ, ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಬೆಳಗಾವಿ ಶೈಕ್ಷಣಿಕ ವಿಭಾಗದ ಅಪರ ಆಯುಕ್ತರಾದ ಜಯಶ್ರೀ ಶಿಂತ್ರೆ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.