
ಪ್ರಗತಿವಾಹಿನಿ ಸುದ್ದಿ: ಬ್ರಾಂಡ್ ಬೆಂಗಳೂರು ಮಾಡಲು ಹೊರಟಿರುವ ರಾಜ್ಯ ಸರ್ಕಾರ ಬೆಂಗಳೂರಿನ ಅಭಿವೃದ್ಧಿ ಮತ್ತು ಸುಗಮ ಆಡಳಿತಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಂಗಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತಗೆದುಕೊಂಡಿದೆ.
ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಬಿಬಿಎಂಪಿ ವಿಭಜನೆ ಸಂಬಂಧ 2014ರಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಪಾಲಿಕೆಯನ್ನು ಐದು ಭಾಗಗಳನ್ನಾಗಿ ವಿಭಜಿಸಲು ಶಿಫಾರಸು ಮಾಡಿ ವರದಿ ಸಲ್ಲಿಸಿತ್ತು.
ಅದರಂತೆ 2015ರಲ್ಲಿ ಬಿಬಿಎಂಪಿ ಚುನಾವಣೆಗೆ ಮುನ್ನ ಪಾಲಿಕೆಯನ್ನು ಮೂರು ಹೋಳಾಗಿ ವಿಭಜಿಸಲು ಸರ್ಕಾರ ಮುಂದಾಗಿತ್ತು. 2015ರ ಮಾರ್ಚ್ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2015ಕ್ಕೆ ಒಪ್ಪಿಗೆ ಸೂಚಿಸಿತ್ತು. ಅದೇ ವರ್ಷ ಏಪ್ರಿಲ್ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿತ್ತು. ಆದರೆ, ವಿಧಾನ ಪರಿಷತ್ನಲ್ಲಿ ವಿಧೇಯಕಕ್ಕೆ ಸೋಲು ಉಂಟಾಗಿತ್ತು.
2015ರ ಜುಲೈ 22ರಂದು ವಿಧಾನಮಂಡಲ ಅಧಿವೇಶನದಲ್ಲಿ ಮತ್ತೊಮ್ಮೆ ವಿಧೇಯಕ ಮಂಡಿಸಿ ಅನುಮೋದನೆ ಪಡೆದಿತ್ತು. ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಬಿಜೆಪಿ, ಜೆಡಿಎಸ್, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಈ ಮಧ್ಯೆ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ರಾಷ್ಟ್ರಪತಿಗೆ ಕಳುಹಿಸಿದ್ದರು. ಹೀಗಾಗಿ, ಬಿಬಿಎಂಪಿ ವಿಭಜನೆಗೆ ಅವಕಾಶ ಒದಗಿರಲಿಲ್ಲ. ಹೈಕೋರ್ಟ್ ಆದೇಶದಂತೆ 2015ರ ಸೆಪ್ಟೆಂಬರ್ನಲ್ಲಿ ಅವಿಭಜಿತ ಬಿಬಿಎಂಪಿಗೆ ಚುನಾವಣೆ ನಡೆದಿತ್ತು.
ಅದೇ ಸಮಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2023ರ ಜೂನ್ 12ರಂದು ಪುನರ್ ರಚಿಸಿದ್ದರು. 2023ರ ಜುಲೈ 18 ರಂದು ಮತ್ತೆ ಈ ಸಮಿತಿಯನ್ನು ಪುನರ್ ರಚನೆ ಮಾಡಿ ಪಾಲಿಕೆ ಆಯುಕ್ತರಾಗಿದ್ದ ಸಿದ್ದಯ್ಯ, ನಗರ ತಜ್ಞ ರವಿಚಂದರ್, ರಾಜ್ಯಸಭೆ ಮಾಜಿ ಸದಸ್ಯ ಎಂ.ವಿ. ರಾಜೀವ್ಗೌಡರನ್ನು ಸದಸ್ಯರನ್ನಾಗಿ ನಿಯೋಜಿಸಲಾಗಿದೆ ಎಂದರು.