*ಬೆಳಗಾವಿ ಜನರಿಗೆ ಗುಡ್ ನ್ಯೂಸ್ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್ ಗಳನ್ನು ನೀಡಲಾಗುವುದು. ಅದರಲ್ಲಿ ನಗರ ಸುತ್ತಮುತ್ತ ಸಂಚಾರಕ್ಕೆ 100 ಎಲೆಕ್ಟ್ರಿಕ್ ಬಸ್ ಗಳನ್ನು ಸಹ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಳಗಾವಿಯಲ್ಲಿ ಇಂದು ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಒಟ್ಟು 700 ಬಸ್ ಕೊಡುತ್ತಿದ್ದೇವೆ. ಅದರಲ್ಲಿ ಬೆಳಗಾವಿ ಜಿಲ್ಲೆಗೆ 300 ಬಸ್ ಕೊಡುತ್ತೇವೆ. ಇದರಲ್ಲಿ 100 ಎಲೆಕ್ಟ್ರಿಕಲ್ ಬಸ್ ಕೂಡ ಇರಲಿದ್ದು. ನಾನು ಸಾರಿಗೆ ಸಚಿವನಾಗಿದ್ದಾಗ ಈ ಭಾಗಕ್ಕೆ ಹಳೆ ಬಸ್ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ 100 ಹಳೆ ಬಸ್ ನೀಡಿದ್ದರು. ಆದರೆ, ನಾವು ಹೊಸ ಬಸ್ ಗಳನ್ನು ಕೊಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ಬೆಳಗಾವಿ ಸಿಟಿ ಬಸ್ ನಿಲ್ದಾಣ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಕಟ್ಟಡ ಪೂರ್ಣಗೊಂಡಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದಲೇ ಲೋಕಾರ್ಪಣೆ ಮಾಡಿಸುತ್ತೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಎಂಟಿಸಿ ಬಸ್ ಗುದ್ದಿ ಐವರ ಸಾವಿನ ಕುರಿತು ಪ್ರತಿಕ್ರಯಿಸಿದ ಅವರು, ಒಂದು ದಿನಕ್ಕೆ 1 ಲಕ್ಷ 80 ಸಾವಿರ ಟ್ರಿಪ್ ಗಳಿರುತ್ತವೆ. ಎಲ್ಲೋ ಒಂದು ಆಕಸ್ಮಿಕವಾಗಿ ಆಗಿದೆಯೋ ಅಥವಾ ಅವರಿಗೆ ಏನಾದರೂ ಖಾಯಿಲೆ ಇತ್ತೋ ಎನ್ನುವ ಬಗ್ಗೆ ತನಿಖೆ ಮಾಡುವಂತೆ ಹೇಳಿದ್ದೇನೆ. ಹಿಂದೆ ನಾನು ಸಾರಿಗೆ ಮಂತ್ರಿ ಆಗಿದ್ದಾಗಲೂ ಈ ರೀತಿ ಘಟನೆ ಆಗಿರಲಿಲ್ಲ. ಈ ದುರಂತದಿಂದ ಸಹಜವಾಗಿ ಎಲ್ಲರಿಗೂ ದುಃಖವಾಗಿದೆ ಎಂದರು.
ಇನ್ನು ಜಿಲ್ಲಾ, ತಾಲ್ಲೂಕಾ ಮಟ್ಟದಲ್ಲಿ ಕಳೆದ 20 ವರ್ಷಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲಾ ಕಡೆಗಳಲ್ಲೂ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.