
ಪ್ರಗತಿವಾಹಿನಿ ಸುದ್ದಿ: 24 ವರ್ಷದ ಮಹಿಳೆಯೊಬ್ಬರು 5.43 ಕೆಜಿ ತೂಕದ ನವಜಾತ ಶಿಶುವಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನ ಆಸ್ಪತ್ರೆಯೊಂದರಲ್ಲಿ ಅಚ್ಚರಿಯೊಂದು ನಡೆದಿದೆ. ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಇದುವರೆಗೆ ಜನಿಸಿದ ಶಿಶುಗಳಲ್ಲಿ ಅತ್ಯಂತ ಭಾರವಾದ ಮಗುವಿನ ಜನನವಾಗಿದೆ.
ಇಂದೋರ್‌ನ ಸರ್ಕಾರಿ ಪಿಸಿ ಸೇಥಿ ಆಸ್ಪತ್ರೆಯಲ್ಲಿ ನಂದಕಿಶೋರ್ ಎಂಬವರ ಪತ್ನಿ ರೀಟಾ 90 ಕೆಜಿ ತೂಕವಿದ್ದು, ಅಧಿಕ ರಕ್ತದೊತ್ತಡ, ಪ್ರಿ-ಎಕ್ಲಾಂಪ್ರಿಯಾ ಮತ್ತು ದೇಹದಲ್ಲಿ ಉಂಟಾದಂತಹ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಇವರಿಗೆ ಸಾಮಾನ್ಯ ಹೆರಿಗೆ ಅಸಾಧ್ಯವೆಂದು ಪರಿಗಣಿಸಿ ಸಿಸೇರಿಯನ್ ಹೆರಿಗೆ ಮಾಡಿದರು.
ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರ ತಂಡವು ಪ್ರಮುಖ ಪಾತ್ರ ವಹಿಸಿದೆ. ಈ ಪ್ರಕರಣವು ಅತ್ಯಂತ ಸೂಕ್ಷ್ಮ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿತ್ತು. ಹೆರಿಗೆಯ ಬಳಿಕ ನವಜಾತ ಶಿಶುವಿನ ನಾಡಿಮಿಡಿತ ಮತ್ತು ರಕ್ತದೊತ್ತಡವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಸ್ತ್ರೀರೋಗ ತಜ್ಞ ಡಾ. ಕೋಮಲ್ ವಿಜಯವರ್ಗಿಯಾ ಅವರು ಹೇಳಿದ್ದಾರೆ.