ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಂದು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಿದೆ. ಮಕ್ಕಳು ದೊಡ್ಡವರಾದಾಗ ಪಾಲಕರು ವೃದ್ಧಾಶ್ರಮಕ್ಕೆ ಹೋಗುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ವಿಷಾದಕರ ಎಂದು ಹಿರಿಯ ಮಕ್ಕಳ ಸಾಹಿತಿ ಕಲಬುರ್ಗಿಯ ಎ. ಕೆ. ರಾಮೇಶ್ವರ ನುಡಿದರು.
ಅವರಿಂದು ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿಮಠದ ಪೂಜ್ಯಶ್ರೀ ಲಿಂ. ಡಾ. ಶಿವಬಸವ ಸ್ವಾಮಿಜಿಯವರ ೧೩೦ನೆಯ ಜಯಂತಿ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ ಎರಡನೇ ದಿನವಾದ ಇಂದು ನಾಗನೂರು ಶ್ರೀ ರುದ್ರಾಕ್ಷಿಮಠದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗು ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡೆಪುಟಿ ಚನ್ನಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಮೂರು ವರ್ಷದ ಮಕ್ಕಳನ್ನು ನಾವಿಂದು ಅಂಗನವಾಡಿಯಲ್ಲಿ ಬಿಟ್ಟು ಹೋಗುತ್ತೇವೆ. ಹಿಂತಿರುಗಿದಾಗ ಮಕ್ಕಳು ಮಲಗಿರುತ್ತವೆ. ಮಕ್ಕಳಿಗೆ ಎದೆಹಾಲು ಉಣಿಸಿದರೆ ಸೌಂದರ‍್ಯ ಹಾಳಾಗುತ್ತದೆಂಬ ತಪ್ಪು ಕಲ್ಪನೆಯಿಂದಾಗಿ ಅಮೃತವನ್ನುಣ್ಣಬೇಕಾದ ಮಕ್ಕಳಿಗೆ ಅದು ಸಿಗುತ್ತಿಲ್ಲ, ಮಕ್ಕಳನ್ನು ಬೆಳೆಸಬೇಕಾದ ರೀತಿಯಲ್ಲಿ ಬೆಳೆಸುತ್ತಿಲ್ಲ ಎಂದರು.
ಮಕ್ಕಳಿಗೆ ನೀಡಬೇಕಾದ ಸಂಸ್ಕೃತಿಯನ್ನು ನಾವು ನೀಡುತ್ತಿಲ್ಲ. ಅದೆಲ್ಲದರ ಪರಿಣಾಮ ಮಕ್ಕಳು ದೊಡ್ಡವರಗಾದ ಪಾಲಕರು ವೃದ್ಧಾಶ್ರಮಕ್ಕೆ ಹೋಗುವಂತಾಗುತ್ತಿದೆ, ಮಕ್ಕಳು ತಮ್ಮಷ್ಟಕ್ಕೆ ತಾವೇ ಉತ್ತಮ ಸಂಸ್ಕಾರ ಹೊಂದುವಂತಾಗಬೇಕಾಗುತ್ತದೆ. ಅಂತಹ ಸಮಾಜವನ್ನು ನಾವು ಬಿಟ್ಟು ಹೋಗಬೇಕಾಗಿತ್ತು. ಅದಕ್ಕೆ ಬದಲಾಗಿ ಕೆಟ್ಟ ಮತ್ತು ಕಲುಷಿತ ಸಮಾಜವನ್ನು ನಾವು ಅವರಿಗೆ ಬಿಟ್ಟು ಹೋಗುವಂತಾಗಬಾರದು. ಮನೆಯಲ್ಲಿ ತಾಯಂದಿರು ವಚನಗಳನ್ನು ಹಾಡುತ್ತ ಕೆಲಸ ಮಾಡಿ. ಆಗ ಅವು ಮಕ್ಕಳ ಕಿವಿಗೆ ಬಿದ್ದು ಉತ್ತಮ ಸಂಸ್ಕಾರ ಹೊಂದುವಂತಾಗುತ್ತದೆ ಎಂದರು.
ಅದೇ ರೀತಿ ಮಕ್ಕಳ ಸಾಹಿತ್ಯಕ್ಕಾಗಿರುವ ಹರ್ಡೇಕರ ಮಂಜಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಕಾಂತ ಕರದಳ್ಳಿ,( ಶಹಾಪುರ) ಅವರು ಮಗುವಿನ ಮನಸ್ಸಿದ್ದರೆ ಮಾತ್ರ ಮಕ್ಕಳ ಸಾಹಿತ್ಯ ರಚಿಸಲು ಸಾಧ್ಯ. ಇಲ್ಲವಾದಲ್ಲಿ ಅದು ಸಾಧ್ಯವಾಗದು, ಪ್ರಬುದ್ಧ ಸಾಹಿತ್ಯ ರಚನೆಗಿಂತ ಮಕ್ಕಳ ಸಾಹಿತ್ಯ ರಚನೆ ನಿಜಕ್ಕೂ ಕಷ್ಟಕರ ಎಂದರು.
ಮೊಟ್ಟ ಮೊದಲ ಬಾರಿ ಬಸವ ಜಯಂತಿ ಆಚರಿಸಲು ಪ್ರಾರಂಭಿಸಿದ ಹರ್ಡೆಕರ ಮಂಜಪ್ಪ ಅವರು ಸಮಾಜಕ್ಕಾಗಿ ಅಖಂಡ ಬ್ರಹ್ಮಚಾರಿಯಾಗಿ ಉಳಿದು ಸಮಾಜಕ್ಕಾಗಿ ದುಡಿದರು. ಕನ್ನಡದಲ್ಲಿ ಮೊಟ್ಟ ಮೊದಲ ಆತ್ಮ ಚರಿತ್ರೆ ರಚಿಸಿದ ಕೀರ್ತಿಯೂ ಮಂಜಪ್ಪ ಅವರಿಗೆ ಸಲ್ಲಬೇಕು. ಅವರೊಬ್ಬ ಸಾಹಿತಿಯಾಗಿ , ಪತ್ರಕರ್ತರಾಗಿ, ಸಂಪಾದಕರಾಗಿ ಸಮಾಜಕ್ಕೆ ಮಾಡಿರುವ ಸೇವೆಯಿಂದಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಅಂಥವರ ಕುರಿತು ಒಂದು ಸಾವಿರ ಪುಟಗಳ ಪುಸ್ತಕ ಪ್ರಕಟವಾಗಿದ್ದು ಸಂತಸದ ವಿಚಾರವಾಗಿದೆ. ಭಾಲ್ಕಿಯ ಸ್ವಾಮಿಜಿ ಅವರು ಹೊರಗೆ ಉರ್ದು ಬೋರ್ಡ ಹಾಕಿ ಒಳಗೆ ಕನ್ನಡ ಕಲಿಸುವ ಕಾರ್ಯ ಮಾಡುತ್ತಿದ್ದುದನ್ನು ಸ್ಮರಿಸಿಕೊಂಡ ಅವರು ಕನ್ನಡ ನುಡಿ ಮತ್ತು ನಾಡಿಗಾಗಿ ಅಪಾರ ಕಷ್ಟ ನಷ್ಟಗಳನ್ನು ಅನುಭವಿಸಿ ಅದ್ವಿತೀಯ ಕಾರ್ಯ ಮಾಡಿದ ಶಿವಬಸವ ಶ್ರೀಗಳ ಕಾರ್ಯವನ್ನು ಅವರು ನೆನೆಪಿಸಿಕೊಂಡರು.
ಸಮಾರಂಭದಲ್ಲಿ ಭಾರತ ಸೇವಾದಳದ ರಾಜ್ಯ ಉಪದಳಪತಿ ಬಸವರಾಜ ಎಂ. ಹಟ್ಟಿಗೌಡರ, ಘಟಪ್ರಭಾ, ನಿವೃತ್ತ ಉಪನ್ಯಾಸಕ ಎಸ್. ವ್ಹಿ. ದಳವಾಯಿ, ಬೆಳಗಾವಿ, ಸಾರಿಗೆ ಇಲಾಖೆಯ ಅಧಿಕಾರಿ ಎಂ. ಡಿ. ಪಾಟೀಲ, ಹುಬ್ಬಳ್ಳಿ ಮತ್ತು ಮಹಾಂತೇಶ ಶಿ. ಘಟಗಿ, ತುಬಚಿ ಇವರುಗಳಿಗೆ ಶ್ರೀಮಠದಿಂದ ಕೊಡಮಾಡುವ ’ಪ್ರಸಾದಶ್ರೀ’ ಗೌರವ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಎಸ್.ಸಿ ಸದಸ್ಯ ವಿಜಯ ಕುಚನೂರೆ ಮತ್ತು ನಿವೃತ್ತ ಕಮಾಂಡರ್ ಬಿ. ಎಸ್. ಕಲ್ಲೂರ ಇವರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಗದುಗಿನ ಜಗದ್ಗುರು ಡಾ:ತೋಂಟದ ಸಿದ್ಧರಾಮಸ್ವಾಮಿಜಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ, ಹಾವೇರಿ ಇವರು ವಹಿಸಿದ್ದರು. ನೇತೃತ್ವವನ್ನು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ ಹಾಗೂ ಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು ಮೋಟಗಿಮಠ, ಅಥಣಿ ಇವರು ವಹಿಸಿದ್ದರು.
ಅಧ್ಯಕ್ಷತೆಯನ್ನು ಪ್ರೊ. ಎಂ. ಆರ್. ಉಳ್ಳೇಗಡ್ಡಿ ಅಧ್ಯಕ್ಷರು, ನಾಗನೂರು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘ ಇವರು ವಹಿಸಿದ್ದರು. ಕಾರ್ಯಕ್ರಮಗಳ ನೇತೃತ್ವವನ್ನು ನಾಗನೂರು ಶ್ರೀ ರುದ್ರಾಕ್ಷಿಮಠದ ನೂತನ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮಿಗಳು ವಹಿಸಿದ್ದರು.
ಕಡೋಲಿ ಮಠದ ಶ್ರೀ ಗುರುಬಸವಲಿಂಗ ಸ್ವಾಮಿಜಿ,ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜಿ, ಕಮತೇನಟ್ಟಿ ಗುರುದೇವ ದೇವರು ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶ್ರೀ ಪ್ರಭುದೇವ ಪ್ರತಿಷ್ಠಾನ, ಮಾತೃಮಂಡಳಿ ಸದಸ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಸಿದ್ದನಗೌಡಾ ಪಾಟೀಲ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ , ಮಾಜಿ ನಗರಸೇವಕಿ ಸರಳಾ ಹೇರೇಕರ ನಿವೃತ್ತ ಪ್ರಾಚಾರ್ಯ ಬಸವರಾಜ ಜಗಜಂಪಿ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಎ.ಕೆ.ಪಾಟೀಲ ಸ್ವಾಗತಿಸಿದರು. ಮಹಾಂತದೇವರು ಮತ್ತು ಸಿ.ಜೆ.ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ