Kannada NewsLatest

ನಾಳೆ ಮತ ಎಣಿಕೆ: 10 ಗಂಟೆ ಹೊತ್ತಿಗೆ ಗೊತ್ತಾಗಲಿದೆ ಟ್ರೆಂಡ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಕರ್ನಾಟಕದ ರಾಜಕೀಯಕ್ಕೆ ಸೋಮವಾರ ಮಹತ್ವದ ದಿನ. ಕಳೆದ ಸುಮಾರು 4-5 ತಿಂಗಳಿನಿಂದ ಇದ್ದ ಕುತೂಹಲಗಳಿಗೆ ನಾಳೆ ತೆರೆ ಬೀಳಲಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.5ರಂದು ನಡೆದಿರು ಉಪಚುನಾವಣೆಯ ಮತ ಎಣಿಕೆ ಸೋಮವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಬಿಜೆಪಿ ಸರಕಾರಕ್ಕೆ ಇದು ಅಳಿವು -ಉಳಿವಿನ ಪ್ರಶ್ನೆಯಾಗಿದ್ದರೆ, ಕಾಂಗ್ರೆಸ್, ಜೆಡಿಎಸ್ ಗೆ ಪ್ರತಿಷ್ಠೆಯಾಗಿದೆ.

ಕನಿಷ್ಠ 6 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಬಿಜೆಪಿ ಸರಕಾರಕ್ಕೆ ಸಧ್ಯಕ್ಕೆ ಅಪಾಯವಿಲ್ಲ. ಎಲ್ಲ ಚುನಾವಣೋತ್ತರ ಸಮೀಕ್ಷೆಗಳೂ ಬಿಜೆಪಿ 9-12 ಸ್ಥಾನ ಗೆಲ್ಲಲಿದೆ ಎಂದಿವೆ. ಹಾಗಾಗಿ ಬಿಜೆಪಿ ಸರಕಾರಕ್ಕೆ ಅಪಾಯ ಕಾಣುತ್ತಿಲ್ಲ.

ಬಿಜೆಪಿ ಎಲ್ಲ 15 ಸ್ಥಾನಗಳನ್ನೂ ಗೆಲ್ಲಲಿದೆ ಎಂದು ಈವರೆಗೂ ಹೇಳುತ್ತ ಬರುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾನುವಾರ 13 ಸ್ಥಾನ ಗೆಲ್ಲುವುದಾಗಿ ಹೇಳಿದ್ದಾರೆ.

ಸೋಮವಾರ ಗೆಲ್ಲಲಿರುವ ಬಿಜೆಪಿ ಅಭ್ಯರ್ಥಿಗಳಿಗೆ ಸಚಿವಸ್ಥಾನ ನೀಡುವ ಭರವಸೆ ನೀಡಲಾಗಿದ್ದು, ನಾಳೆ ಸಂಜೆಯ ಹೊತ್ತಿಗೇ ಸಂಪುಟ ವಿಸ್ತರಣೆ ಪ್ರಕ್ರಿಯೆಯೂ ಆರಂಭವಾಗಲಿದೆ. ಬಿಜೆಪಿ ಹೈಕಮಾಂಡ್ ಅನುಮತಿ ಪಡೆದು 2-3 ದಿನದಲ್ಲಿ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಲಿದೆ.

ಸಂಪುಟ ವಿಸ್ತರಣೆ ಬಿಜೆಪಿಗೆ ಹೇಳಿದಷ್ಟು ಸುಲಭವಾಗಿಲ್ಲ. ಮೊದಲ ಹಂತದಲ್ಲಿ ಸಂಪುಟ ರಚಿಸಿದಾಗಲೇ ಹಲವು ಹಿರಿಯ ಶಾಸಕರು ವಂಚಿತರಾಗಿದ್ದು, ಮುನಿಸಿಕೊಂಡಿದ್ದಾರೆ. ಅವರನ್ನೆಲ್ಲ ತಾತ್ಕಾಲಿಕವಾಗಿ ಸಮಾಧಾನಪಡಿಸಿ, ಉಪಚುನಾವಣೆ ಬಳಿಕ ಅವಕಾಶ ನೀಡುವ ಭರವಸೆ ನೀಡಲಾಗಿದೆ. ಹಾಗಾಗಿ ಉಪಚುನಾವಣೆಯಲ್ಲಿ ಎಷ್ಟು ಅನರ್ಹ ಶಾಸಕರು ಗೆಲ್ಲಲಿದ್ದಾರೆ ಎನ್ನುವುದರ ಮೇಲೆ ಇದು ಅವಲಂಬಿಸಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button