*ರಾತ್ರಿ ಜಗಳ, ಬೆಳಗ್ಗೆ ಚಾಕುವಿನಿಂದ ಹಲ್ಲೆ: ಯುವಕನ ಕೊಲೆ ಕೇಸ್ ನಲ್ಲಿ ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೆಳೆಯನ ಬರ್ತಡೇ ಮುಗಿಸಿ ಮನೆಗೆ ವಾಪಸ್ ಹೋಗುವಾಗ, ತಮ್ಮ ಮನೆ ಮುಂದೆ ಕೇಕೆ ಹಾಕಿದ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಮಾಹಿತಿ ನೀಡಿದ್ದಾರೆ.
ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಮುತ್ತಣ್ಣ ದುರ್ಗಪ್ಪ ಗುಡಬಲಿ(22) ಕೊಲೆಯಾದ ಯುವಕ. ಆಗಸ್ಟ್ 16ರಂದು ಮುತ್ತಪ್ಪ ಗೆಳೆಯನ ಬರ್ತಡೇ ಮುಗಿಸಿ ವಾಪಸ್ಸು ಮನೆಗೆ ಬರುವಾಗ ಆರೋಪಿಗಳ ಮನೆ ಮುಂದೆ ಯಾರೋ ಕೇಕೆ ಹಾಕಿದ್ದಾರೆ. ಮುತ್ತಣ್ಣನೇ ಕೇಕೆ ಹಾಕಿದ್ದಾನೆ ಎಂದು ಆರೋಪಿಗಳು ಜಗಳ ತೆಗೆದಿದ್ದಾರೆ. ಆ ವೇಳೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಹೇಶ ಸದಾನಂದ ನಾರಿ, ವಿಶಾಲ ಸದಾನಂದ ನಾರಿ ಮತ್ತು ಸಿದ್ದಪ್ಪ ಮೂಕಪ್ಪ ಮುತ್ತೆನ್ನವರ ಎಂಬ ಆರೋಪಿಗಳು ಭಾನುವಾರ ಬೆಳಿಗ್ಗೆ ಹುದಲಿ ಗ್ರಾಮದ ಜನತಾ ಪ್ಲಾಟ್ ನಲ್ಲಿರುವ ರಾಯಣ್ಣನ ಬೋರ್ಡ ಹತ್ತಿರ ಕುಳಿತಿದ್ದ ಮುತ್ತಣ್ಣನ ಜೊತೆಗೆ ಜಗಳ ತೆಗೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮೂವರು ಆರೋಪಿಗಳು ಚಾಕುವಿನಿಂದ ಮುತ್ತಣ್ಣನ ಹೊಟ್ಟೆ, ಭುಜ, ಕೈಯ್ಯಿಗೆ ಮನಸೋ ಇಚ್ಚೆ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮುತ್ತಣ್ಣನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮುತ್ತಣ್ಣ ಮೃತಪಟ್ಟಿದ್ದಾರೆ.
ಮಾರಿಹಾಳ ಪೊಲೀಸರು ಆರೋಪಿಗಳಾದ ಮಹೇಶ ನಾರಿ, ಸಿದ್ದಪ್ಪ ಮುತ್ತೆನ್ನವರನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ವಿಶಾಲ ನಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖನಾದ ಬಳಿಕ ಆತನನ್ನೂ ಬಂಧಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾಧ್ಯಮಗಳಿಗೆ ತಿಳಿಸಿದರು.