
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಾಡ ಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಸೂಕ್ತ ವ್ಯಕ್ತಿ ಅಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ದಸರಾ 100% ಧಾರ್ಮಿಕ ಆಚರಣೆ. ನವರಾತ್ರಿ ಉತ್ಸವ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಲಾಗುತ್ತದೆ. ಬಾನು ಮುಷ್ತಾಕ್ ಅವರಿಗೆ ಚಾಮುಂಡಿ ಮೇಲೆ ನಂಬಿಕೆ ಇದೆಯಾ? ಸಾಹಿತಿ ಬಾನು ಮುಷ್ತಾಕ್ ಚಾಮುಂಡಿ ತಾಯಿ ಭಕ್ತೆ ಎಂದು ಹೇಳಿದ್ದಾರಾ? ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರೆ? ಎಂದು ಕೇಳಿದ್ದಾರೆ.
ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾನ್ನಾಗಿ ಘೋಷಿಸಿದರೆ ನಮ್ಮ ತಕರಾರಿಲ್ಲ. ಆದರೆ ಧಾರ್ಮಿಕ ನಂಬಿಕೆ ವಿರೋಧಿಗಳಿಗೆ ಯಾಕೆ ಸಿಎಂ ಸಿದ್ದರಾಮಯ್ಯ ದಸರಾ ಉದ್ಘಾಟನೆಗೆ ಕರೆದಿದ್ದಾರೆ? ಮಹಾರಾಜರ ಪರಂಪರೆಯನ್ನು ಸಿಎಂ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಟ ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಅವರನ್ನು ಕರೆಯುತ್ತೀರಾ? ಪ್ರಶಸ್ತಿ ಬಂದವರನ್ನೆಲ್ಲಾ ದಸರಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಎಂದು ವಾಗ್ದಾಳಿ ನಡೆಸಿದ್ದಾರೆ.