*ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಲುಕ್ ಔಟ್ ನೋಟಿಸ್ ಜಾರಿ*

ಏನಿದು ಪ್ರಕರಣ?
ಪ್ರಗತಿವಾಹಿನಿ ಸುದ್ದಿ: ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಹೊಸ ಸಂಕಷ್ಟ ಎದುರಾಗಿದೆ. 60 ಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ದಂಪತಿಗೆ ಲುಕ್ ಔಟ್ ನೋಟಿಸ್ ಜಾರಿಯಾಗಿದೆ.
ದೀಪಕ್ ಕೊಠಾರಿ ಎಂಬ ಉದ್ಯಮಿ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ 60 ಕೋಟಿ ವಂಚನೆ ದೂರು ದಾಖಲಿಸಿದ್ದಾರೆ. 2015 ಮತ್ತು 2023ರ ನಡುವೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಉದ್ಯಮ ವಿಸ್ತರಣೆಗೆಂದು 60 ಕೋಟಿ ಹಣವನ್ನು ತಮ್ಮಿಂದ ಪಡೆದಿದ್ದಾರೆ. ಆದರೆ ಆ ಹಣವನ್ನು ಸಾಲ ಪಡೆದ ಉದ್ದೇಶಕ್ಕೆ ಬಳಸಿಕೊಳ್ಳದೇ ತಮ್ಮ ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಿದ್ದಾರೆ. ಅಲ್ಲದೇ ತಾವ್ ಕೊಟ್ಟ ಹಣವನ್ನು ಹೂಡಿಕೆ ಎಂದು ತೋರಿಸುವ ಮೂಲಕ ತೆರಿಗೆ ವಂಚನೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಲವಾಗಿ ಪಡೆದ ಹಣಕ್ಕೆ ವಾರ್ಷಿಕ 12 ಪರ್ಸೆಂಟ್ ಬಡ್ಡಿ ಕೊಡುವುದಾಗಿ ದಂಪತಿ ಒಪ್ಪಂದ ಮಾಡಿಕೊಂಡಿದ್ದರು. ೨೦೧೬ರಲ್ಲಿ ಶಿಲ್ಪಾ ಶೆಟ್ಟಿ ಸಾಲಕ್ಕೆ ಗ್ಯಾರಂಟಿಯನ್ನೂ ಒದಗಿಸಿದ್ದರು. ಅದಾದ ಬಳಿಕ ಅವರೇ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಬಡ್ಡಿ ಪಾವತಿಸದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಆರ್ಥಿಕ ಅಪರಾಧ ತಡೆ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಈ ಪ್ರಕರಣ ಸಂಬಂಧ ಕೋರ್ಟ್, ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಇಬ್ಬರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.