*ಮಲ್ಲಿಗೆ ಹೂ ತಂದಿಟ್ಟ ಸಂಕಷ್ಟ: 1.14 ಲಕ್ಷ ರೂ. ದಂಡ ಕಟ್ಟಿದ ಖ್ಯಾತ ನಟಿ*

ಪ್ರಗತಿವಾಹಿನಿ ಸುದ್ದಿ: ಜನಪ್ರಿಯ ನಟಿ ನವ್ಯಾ ನಾಯರ್, ಮಲ್ಲಿಗೆ ಹೂ ಕೊಂಡೊಯ್ದ ಕಾರಣಕ್ಕೆ 1.14 ಲಕ್ಷ ರೂಪಾಯಿ ದಂಡ ಕಟ್ಟಬೇಕಾದ ಘಟನೆ ಬೆಳಕಿಗೆ ಬಂದಿದೆ.
ಹೌದು.. ಹೆಣ್ಣುಮಕ್ಕಳು ಮಲ್ಲಿಗೆ ಮುಡಿದರೆ ಇನ್ನಷ್ಟು ಅಂದವಾಗಿ ಕಾಣುತ್ತಾರೆ. ಇದೇ ಕಾರಣಕ್ಕೆ ಮಲ್ಲಿಗೆಯನ್ನು ಅಲಂಕಾರದ ಪ್ರಮುಖ ಭಾಗವನ್ನಾಗಿ ಬಳಸುವುದು ಸಾಮಾನ್ಯ. ಹಿಂದೆ ಸೀರೆ ಧರಿಸಿ ಮಲ್ಲಿಗೆ ಮುಡುವುದು ಸಾಂಪ್ರದಾಯದ ಪ್ರತಿಬಿಂಬವಾಗಿದ್ದರೆ, ಈಗ ಅದನ್ನು ಫ್ಯಾಶನ್ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಇದೇ ಮಲ್ಲಿಗೆ ಹೂ ಖ್ಯಾತ ನಟಿಗೆ ಸಂಕಷ್ಟ ತಂದಿದೆ.
ನಟ ದರ್ಶನ್ ಜೊತೆ ಗಜ ಸಿನಿಮಾದಲ್ಲಿ ಅಭಿನಯಿಸಿದ್ದ ಜನಪ್ರಿಯ ನಟಿ ನವ್ಯಾ ನಾಯರ್, ಮಲ್ಲಿಗೆ ಹೂ ಕೊಂಡೊಯ್ದ ಕಾರಣಕ್ಕೆ 1.14 ಲಕ್ಷ ರೂಪಾಯಿ ದಂಡ ಕಟ್ಟಬೇಕಾದ ಘಟನೆ ಬೆಳಕಿಗೆ ಬಂದಿದೆ.
ತಿಳಿಯದೆ ತಪ್ಪು ಮಾಡಿದ ನಟಿ
ಮಲಯಾಳಿ ಸಂಘ ಆಫ್ ವಿಕ್ಟೋರಿಯಾ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಭಾಗವಹಿಸಲು ನವ್ಯಾ ನಾಯರ್ ಇತ್ತೀಚೆಗೆ ಆಸ್ಟ್ರೇಲಿಯಾಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಅವರು 15 ಸೆಂ.ಮೀ ಉದ್ದದ ಮಲ್ಲಿಗೆ ಹೂವಿನ ಮೊಳ ಹೊತ್ತೊಯ್ದ ಕಾರಣಕ್ಕೆ ಮೆಲ್ಲೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಆಸ್ಟ್ರೇಲಿಯಾದಲ್ಲಿ ಮಲ್ಲಿಗೆ ಹೂ ನಿಷೇಧಿತವಾಗಿರುವುದರಿಂದ, ಅವರಿಗೆ 1.14 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು.
ನಟಿ ಹೇಳಿದ್ದೇನು..?
ನಾನು ಇಲ್ಲಿಗೆ ಬರುವ ಮೊದಲು ನನ್ನ ತಂದೆ ನನಗಾಗಿ ಮಲ್ಲಿಗೆಯನ್ನು ಖರೀದಿಸಿದ್ದರು. ಅವರು ಅದನ್ನು ಎರಡು ಭಾಗಗಳಾಗಿ ಕತ್ತರಿಸಿ ಕೊಟ್ಟರು. ಕೊಚ್ಚಿಯಿಂದ ಸಿಂಗಾಪುರಕ್ಕೆ ತೆರಳುವಾಗ ಒಂದು ಹೂವನ್ನೇನು ಧರಿಸಿದ್ದೆ. ಸಿಂಗಾಪುರದಿಂದ ಮುಂದಿನ ಪ್ರಯಾಣದಲ್ಲಿ ಮತ್ತೊಂದನ್ನು ಧರಿಸಲು, ಅದನ್ನು ನನ್ನ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಲು ತಂದೆ ಹೇಳಿದ್ದರು. ನಾನು ಅದನ್ನು ಕ್ಯಾರಿ ಬ್ಯಾಗ್‌ನಲ್ಲಿ ಇಟ್ಟಿದ್ದೆ” ಎಂದು ನಟಿ ನವ್ಯಾ ನಾಯರ್ ಹೇಳಿದ್ದಾರೆ.