*ಸೆ.15 ರಂದು ಖಾನಾಪುರಕ್ಕೆ ಕೇಂದ್ರ ಸಚಿವ ಸೋಮಣ್ಣ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೆ.15ರಂದು ಸೋಮವಾರ ಸಂಜೆ 4 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿದ್ದು, ಅಂದು ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ಅವರು 3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ಮಾಹಿತಿ ನೀಡಿದರು.
ಶುಕ್ರವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, “ಖಾನಾಪುರ ರೈಲು ನಿಲ್ದಾಣದ ಪ್ಲಾಟಫಾರ್ಮ್ ವಿಸ್ತರಣೆ, ಶೌಚಾಲಯ ನಿರ್ಮಾಣ, ಅಸೋಗಾ ರಸ್ತೆಯ ರೈಲ್ವೆ ಕೆಳಸೇತುವೆ ಕಾಮಗಾರಿ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಜೊತೆಗೆ ಹುಬ್ಬಳ್ಳಿ ದಾದರ್ ಎಕ್ಸಪ್ರೆಸ್ ರೈಲು ಖಾನಾಪುರ ರೈಲು ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಗೆ ಅವರು ಹಸಿರು ನಿಶಾನೆ ನೀಡಲಿದ್ದಾರೆ” ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ರೈಲ್ವೆ ಅಧಿಕಾರಿಗಳು, ಶಾಸಕರು, ಸಚಿವರು ಉಪಸ್ಥಿತರಿರಲಿದ್ದು, ಸಚಿವರಿಗೆ ತಾಲ್ಲೂಕಿನ ನಾಗರಿಕರ ಪರವಾಗಿ ಇಲ್ಲಿಂದ ಪಂಢರಪುರಕ್ಕೆ ಹೋಗುವ ಭಕ್ತರ ಅನುಕೂಲಕ್ಕಾಗಿ ವಾಸ್ಕೋ-ಪಂಡರಪುರ ಪ್ಯಾಸೆಂಜರ್ ರೈಲು ಸೇವೆಯನ್ನು ಆರಂಭಿಸಬೇಕು ಮತ್ತು ಈ ಮಾರ್ಗದ ಮೂಲಕ ನಿತ್ಯ ಸಂಚರಿಸುವ ಬೆಳಗಾವಿ-ಬೆಂಗಳೂರು ಎಕ್ಸಪ್ರೆಸ್ ರೈಲಿಗೂ ಖಾನಾಪುರದಲ್ಲಿ ನಿಲುಗಡೆ ಸೌಲಭ್ಯ ನೀಡಬೇಕು ಎಂಬ ಮನವಿ ಸಲ್ಲಿಸಲಾಗುತ್ತದೆ ಎಂದು ಶಾಸಕರು ವಿವರಿಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಗುಂಡು ತೋಪಿನಕಟ್ಟಿ, ಸಂಜಯ ಕುಬಲ, ಬಾಬುರಾವ ದೇಸಾಯಿ, ಸುಂದರ ಕುಲಕರ್ಣಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ಖಾನಾಪುರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಮುಖಂಡರ ಸಭೆಯಲ್ಲಿ ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ಮತ್ತಿತರರು ಭಾಗವಹಿಸಿದ್ದರು.