*ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶಕ್ಕೆ ಪಂಚಮಸಾಲಿಗರು ಹೋಗಬಾರದು ಮೃತ್ಯುಂಜಯ ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶಕ್ಕೆ ಪಂಚಮಸಾಲಿ ಸಮಾಜದವರು ಯಾರೂ ಹೋಗಬಾರದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ, ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ನಮಗೆ ಸಹಕಾರ ನೀಡಿಲ್ಲ. ನಮ್ಮ ಮೇಲೆ ಲಾಠಿ ಚಾರ್ಜ್ ಆದರೂ ಕೂಡ ಒಂದು ಸಮಾಧಾನದ ಮಾತು ಆಡಿಲ್ಲ. ಹಾಗಾಗಿ ನಾನು ಎಲ್ಲ ನನ್ನ ಸಮಾಜದ ಮುಖಂಡರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇನೆ. ಯಾರು ನಮ್ಮ ಪಂಚಮಸಾಲಿ ಮುಖಂಡರು ಹಾಗೂ ಜನರು ಆ ಸಮಾವೇಶಕ್ಕೆ ಹೋಗಬೇಡಿ. ಸಮಾವೇಶಕ್ಕೆ ಹೋಗಿ ಗೊಂದಲ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು ಎಂದರು.
ಪಂಚಮಸಾಲಿಗರು ಲಿಂಗಾಯತ ಧರ್ಮದ ಭಾಗವೇ ಆಗಿದ್ದಾರೆ. ನಾವೇ ಮೂಲ ಲಿಂಗಾಯತರು. ಅದೇರೀತಿ ನಾವು ಮೂಲತಃ ವೀರಶೈವರೂ ಅಲ್ಲ. ಹಾಗಾಗಿ, ವೀರಶೈವ ಪದ ನಮಗೆ ಸಂಬಂಧಿಸಿದ್ದಲ್ಲ. ನಮ್ಮ ಹಿರಿಯರ ದಾಖಲಾತಿಗಳು ಮತ್ತು ಎಲ್ಲ ಸಮುದಾಯ ಭವನಗಳ ಮೇಲೆ ಲಿಂಗಾಯತ ಅಂತಾನೇ ಇದೆ ಎಂದು ಪ್ರಶ್ನೆಯೊಂದಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಈಗಾಗಲೇ ನಮ್ಮ ಪಂಚಮಸಾಲಿ ವಕೀಲರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ಲಿಂಗಾಯತ ಪಂಚಮಸಾಲಿ ಅಂತಾನೇ ಬರೆಯಿಸಬೇಕು ಅಂತ ಹೇಳಲಾಗಿದೆ. ಬೇರೆ ಯಾವುದೇ ಸಮಾಜದ, ಮಠಗಳ ಮುಖಂಡರ ಮಾತು ಕೇಳಬಾರದು. ಪಂಚಮಸಾಲಿ ಶ್ರೀಗಳು, ಪಂಚಮಸಾಲಿ ಮುಖಂಡರು ಏನು ಹೇಳುತ್ತಾರೆ ಆ ಆದೇಶವನ್ನು ಪಾಲಿಸಬೇಕು. ಈಗಾಗಲೇ ಲಿಂಗಾಯತ ಪಂಚಮಸಾಲಿ ಕೋಡ್ ನಂ- A-0868 ಇದನ್ನ ಬರೆಯಿಸಬೇಕು. ಯಾವುದೇ ಶ್ರೀಗಳು ಗೊಂದಲ ಮಾಡಿಕೊಳ್ಳಲಿ ಬಿಡಲಿ ನಮ್ಮದು ಒಂದೇ ಧ್ಯೇಯವಿದೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಹರಿಹರ ಪೀಠದ ವಚನಾನಂದ ಶ್ರೀಗಳ ಹೇಳಿಕೆಗೆ ಇಷ್ಟು ದಿನ ಅವರು ಪಾಪ ವೀರಶೈವ ಅಂತ ಹೇಳುತ್ತಾ ಬಂದಿದ್ದರು. ಸದ್ಯ ಅವರು ಇವಾಗ ಲಿಂಗಾಯತ ಅಂತ ಬಂದಿದ್ದಾರೆ. ನಮ್ಮೆಲ್ಲರ ಧ್ವನಿ ಒಂದೇ ಇದೆ. ಲಿಂಗಾಯತ ಪಂಚಮಸಾಲಿ ಅಂತಾನೇ ಇದೆ. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಮುಂದಿನ ಹಂತದಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇನ್ನು ಶ್ರಾವಣ ಮಾಸದ ಅಂಗವಾಗಿ ರಾಯಬಾಗ ತಾಲ್ಲೂಕಿನ ಗ್ರಾಮಗಳಲ್ಲಿ ಜರುಗಿದ “ಗ್ರಾಮ ಗ್ರಾಮದಲ್ಲಿ ಕೂಡಲಸಂಗಮ” ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ರ್ಯಾಲಿಯು ಸೆ.20ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಹಾರೂಗೇರಿಯ ಶ್ರೀ ಚನ್ನವೃಷಭೇಂದ್ರ ಲೀಲಾಮಠದಲ್ಲಿ ನಡೆಯಲಿದೆ. ಮುಂದೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ನಡೆಯಲಿದೆ. 2ಎ ಮೀಸಲಾಗಿ ಸಿಗೋವರೆಗೂ ಹೋರಾಟ ಮುಂದುವರಿಯಲಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಆರ್.ಸಿ.ಪಾಟೀಲ, ಮುಖಂಡರಾದ ಅಡಿವೇಶ ಇಟಗಿ, ಗುಂಡು ಪಾಟೀಲ, ನಿಂಗಪ್ಪ ಕರಿಕಟ್ಟಿ ಸೇರಿ ಮತ್ತಿತರರು ಇದ್ದರು.