Belagavi NewsBelgaum NewsKannada NewsKarnataka News

*ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ: ನ್ಯಾಯಾಧೀಶ ಸಂದೀಪ ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾದಕ ವಸ್ತುಗಳು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಹಾಗೂ ಮಾದಕ ವ್ಯಸನಿಗಳನ್ನು ಗುರುತಿಸಿ ತಡೆಗಟ್ಟುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂದೀಪ ಪಾಟೀಲ ಅವರು ಹೇಳಿದರು.

ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕರ್ನಾಟಕ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ(ಸೆ.20) ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಪರಿವರ್ತನೆ ಮಾದಕ ಮುಕ್ತ ಕರ್ನಾಟಕ ಅಭಿಯಾನ ಹಾಗೂ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ವಿವಿಧ ಬಗೆಯ ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಯುವಜನತೆ ದುಶ್ಚಟಗಳಿಂದ ತಮ್ಮ ಜೀವನದ ಜೊತೆಗೆ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತಿರುವುದು ಖೇದಕರವಾದಂತಹ ಸಂಗತಿಯಾಗಿದೆ.

ಮಾದಕ ವ್ಯಸನದ ಅಮಲಿನಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯವು ಹಾಳಾಗುತ್ತಿದೆ ಎಂದರು.

Home add -Advt

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಾವು ಮಕ್ಕಳಿಗೆ ಚಿಕ್ಕಂದಿನಿಂದಲೆ ಜಾಗೃತಿ ಮೂಡಿಸಬೇಕು, ಸಮಾಜದಲ್ಲಿ ಯಾವುದೇ ಸ್ಥಳದಲ್ಲಿ ಮಾದಕ ವ್ಯಸನಿಗಳಾಗಳಿ ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಕಂಡು ಬಂದಲ್ಲಿ ದೂರು ನೀಡುವದರ ಮೂಲಕ ಸಮಾಜಘಾತುಕ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರನ್ನು ಕಾನೂನಿನ ಮೂಲಕ ಬುದ್ದಿ ಕಲಿಸಲು ಮುಂದಾಗಬೇಕು.

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವದರ ಮೂಲಕ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ನಮ್ಮ ಆರೋಗ್ಯ ಸಧೃಡವಾಗಿದ್ದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಅವರು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಬೋರನೆ ಭೂಷಣ ಗುಬರಾವ್ ಅವರು ಮಾತನಾಡಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ, ಯುವ ಪೀಳಿಗೆ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾದಕ ವಸ್ತುಗಳ ಮಾರಾಟ ಜಾಲ ಜಗತ್ತಿನಾದ್ಯಂತ ಇರುವ ದೊಡ್ಡ ಸಮಸ್ಯೆಯಾಗಿದೆ.

ನಮ್ಮ ರಾಜ್ಯ ನಮ್ಮ ದೇಶವನ್ನು ಸದೃಢವಾಗಿಡಲು ನಾವೆಲ್ಲರು ಸೇರಿಕೊಂಡು ಕೆಲಸ ಮಾಡಬೇಕು. ನಮ್ಮ ಸುತ್ತ ಮುತ್ತಲು ಮಾದಕ ವಸ್ತುಗಳ ಕುರಿತು ಚಟುವಟಿಕೆಗಳನ್ನು ಕಂಡುಬಂದಲ್ಲಿ ಪೊಲೀಸ್ ಇಲಾಖೆಯ ಜಾಲತಾಣ ಅಥವಾ ಸಹಾಯವಾಣಿ ಸಂಖ್ಯೆ ಮೂಲಕ ತಿಳಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ಮಾದಕ ವ್ಯಸನಗಳ ಸೇವನೆ ಮಾಡುವುದು ಇಂದಿನ ಯುವ ಪೀಳಿಗೆಗೆ ಒಂದು ಗರ್ವದ ಸಂಕೇತವಾಗಿದೆ. ಮಾದಕ ವಸ್ತುಗಳ ಸೇವನೆಯಿಂದಾಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿರುವ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ.

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡದೆ ಹೋದರೆ ಯುವ ಪೀಳಿಗೆ ನಾಶವಾಗಿ ಹೋಗುತ್ತದೆ. ರಾಸಾಯನಿಕವಾಗಿ ತಯಾರಿಸುತ್ತಿರುವ ಮಾದಕ ವಸ್ತುಗಳಿಗೆ ಯುವ ಪೀಳಿಗೆ ಹಾಳಾಗುತ್ತಿದ್ದು ಅಂತವರನ್ನು ಗುರುತಿಸಿ ಯುವಜನರನ್ನು ಉಳಿಸುವುದರ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಹೇಳಿದರು.

ಅಬಕಾರಿ ಉಪ ಆಯುಕ್ತ ಎಮ್. ವನಜಾಕ್ಷೀ ಅವರು ಮಾತನಾಡಿ ವೈಯಕ್ತಿಕ ಜೀವನ ಹಾಗೂ ಕೌಟುಂಬಿಕ ಜೀವನದ ಮೇಲೆ ವ್ಯಸನಗಳು ತುಂಬಾ ಪ್ರಭಾವ ಬೀರುತ್ತವೆ. ದೈಹಿಕವಾಗಿ, ಮಾನಸಿಕವಾಗಿ ವ್ಯಸನಗಳು ಮನುಷ್ಯರನ್ನು ಕುಗ್ಗಿಸುತ್ತವೆ. ಮಾದಕ ವಸ್ತು ಎಂದರೆ ಮತ್ತಿನಲ್ಲಿ, ಅಮಲಿನಲ್ಲಿ ಇರುವಂತಹ ವಸ್ತು. ನಮ್ಮ ದೇಹಕ್ಕೆ ಕ್ರಿಯಾಶೀಲತೆ ಇಲ್ಲದಿರುವ ಹಾಗೆ ಮಾಡುತ್ತದೆ. ಮಾನಸಿಕ ಸ್ಥಿತಿ ಸಮತೋಲನ ತಪ್ಪಿಸುತ್ತದೆ. ತಮ್ಮ ಮೇಲಿನ ಹಿಡಿತವನ್ನು ತಪ್ಪಸಿ ಅಪರಾಧ ಕೃತ್ಯಗಳನ್ನು ಮಾದಕ ವಸ್ತುಗಳು ಮಾಡಿಸುತ್ತವೆ.

ಪ್ರಪಂಚದಾದ್ಯಂತ 190 ದಶಲಕ್ಷಕ್ಕೂ ಹೆಚ್ಚು ಮಾದಕ ವ್ಯಸನಿಗಳಿದ್ದಾರೆ. ಇದರಲ್ಲಿ ಅತಿ ಹೆಚ್ಚು ಯುವ ಜನಾಂಗ ಇದೆ ಎಂಬುದು ಆತಂಕಕಾರಿಯಾದ ವಿಷಯವಾಗಿದೆ. ಎಲ್ಲರು ಸೇರಿಕೊಂಡು ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಬೆಳಗಾವಿ ಉತ್ತರ ವಲಯದ ಅಬಕಾರಿ ಇಲಾಖೆ ಉಪ ಆಯುಕ್ತ ಸ್ವಪ್ನಾ ಆರ್.ಎಸ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂಧರ್ಬದಲ್ಲಿ ಮಾದಕ ಮುಕ್ತ ಅಭಿಯಾನ ಹಾಗೂ ಸ್ವಚ್ಛತಾ ಹೀ ಸೇವಾ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಯಿತು.

Related Articles

Back to top button