Belagavi NewsBelgaum NewsKannada NewsKarnataka News

*ಯಲ್ಲಮ್ಮನ ಸನ್ನಿಧಿಯಲ್ಲಿ ನವರಾತ್ರಿ ಸಡಗರ: ಉತ್ಸವ ಆಚರಣೆಗೆ ಸಕಲ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಈಗ ನವರಾತ್ರಿ ಸಡಗರ ಮನೆಮಾಡಿದೆ. ಒಂಭತ್ತು ದಿನಗಳ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ನೆರವೇರಿಸಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಸಜ್ಜಾಗಿದೆ.

ಸೆ.22ರಂದು ಸಂಜೆ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮೊದಲ ಘಟ್ಟ ಸ್ಥಾಪಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು. ಬಳಿಕ ಒಂಭತ್ತು ದಿನಗಳವರೆಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಲಿದೆ. ಪ್ರತಿದಿನವೂ ಒಂದೊಂದು ಅವತಾರದಲ್ಲಿ ಸಾವಿರಾರು ಸೀರೆಗಳನ್ನು ಬಳಸಿ, ದೇವಿಗೆ ಅಲಂಕಾರ ಮಾಡಲಾಗುತ್ತದೆ.

ನವರಾತ್ರಿ ಉತ್ಸವದಲ್ಲಿ ಲಕ್ಷಲಕ್ಷ ಸಂಖ್ಯೆಯಲ್ಲಿ ಭಕ್ತಸಮೂಹ ಅಮ್ಮನ ಸನ್ನಿಧಿಗೆ ಬರುತ್ತದೆ. ಕರ್ನಾಟಕಕ್ಕಿಂತ ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದ ಅತ್ಯಧಿಕ ಭಕ್ತರು ಗುಡ್ಡಕ್ಕೆ ಬರುತ್ತಾರೆ.

ನವರಾತ್ರಿ ಸಂದರ್ಭ ಗುಡ್ಡಕ್ಕೆ ಬರುವ ಪ್ರತಿ ಭಕ್ತರು ದೀಪಕ್ಕೆ ಎಣ್ಣೆ ಹಾಕುವುದು ವಾಡಿಕೆ. ಹಾಗಾಗಿ ಯಲ್ಲಮ್ಮ ದೇವಿಯ ಗರ್ಭಗುಡಿ ಎದುರು ಬೃಹತ್ ದೀಪ ಅಳವಡಿಕೆ ಮಾಡಲಾಗಿದೆ. ಭಕ್ತರು ಅದರಲ್ಲೇ ಎಣ್ಣೆ ಹಾಕಿ ಭಕ್ತಿ ಸಮರ್ಪಿಸಲಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ, ಏಕಕಾಲಕ್ಕೆ ಎಲ್ಲರಿಗೂ ದೇವಸ್ಥಾನಕ್ಕೆ ಹೋಗಲು ಕಷ್ಟಸಾಧ್ಯ. ಹಾಗಾಗಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿಯೂ ದೀಪಗಳ ಅಳವಡಿಕೆ ಮಾಡಲಾಗಿದೆ.

Home add -Advt

2023ರಲ್ಲಿ ನವರಾತ್ರಿಯಲ್ಲಿ 14,194 ಕೆ.ಜಿ ಎಣ್ಣೆ ಸಂಗ್ರಹವಾಗಿತ್ತು. ಪ್ರತಿ ಕೆ.ಜಿಗೆ 51 ರೂಪಾಯಿ ದರದಲ್ಲಿ ಮಾರಿದಾಗ 7,23,894 ರೂಪಾಯಿ ಆದಾಯ ಬಂದಿತ್ತು. 2024ರಲ್ಲಿ 16,200 ಕೆ.ಜಿ ಎಣ್ಣೆ ಸಂಗ್ರಹವಾಗಿ, ಪ್ರತಿ ಕೆ.ಜಿಗೆ 58 ರೂಪಾಯಿ ದರದಲ್ಲಿ ಮಾರಿ 9,39,600 ರೂಪಾಯಿ ಆದಾಯ ಬಂದಿತ್ತು. ಕಳೆದ ವರ್ಷ 21 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದರು. ಈ ಬಾರಿಯೂ ಹೆಚ್ಚಿನ ಭಕ್ತರು ಭೇಟಿ ನೀಡಿ, ಹೆಚ್ಚಿನ ಎಣ್ಣೆ ಸಂಗ್ರಹವಾಗುವ ನಿರೀಕ್ಷೆಯಿದೆ. 1, 3, 5, 7 ಮತ್ತು 9ನೇ ದಿನಗಳಂದು ಗುಡ್ಡಕ್ಕೆ ಬರುವವರ ಪ್ರಮಾಣ ಗಣನೀಯವಾಗಿ ಇರಲಿದೆ. ಇನ್ನೂ ಉತ್ಸವದಲ್ಲಿ ಜನದಟ್ಟಣೆ ಆಗಬಹುದೆಂದು ಕೆಲವರು ಮೊದಲೇ ಗುಡ್ಡಕ್ಕೆ ಬಂದು ದೇವಿ ದರ್ಶನ ಪಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತಿದೆ.

ಅ.1ರಂದು ಆಯುಧ ಪೂಜೆ ಇದ್ದು, 2ರಂದು ಬನ್ನಿ ಮುಡಿಯುವ ಮುಖಾಂತರವಾಗಿ ಉತ್ಸವ ಸಮಾರೋಪಗೊಳ್ಳಲಿದೆ. ನವರಾತ್ರಿ ಅಂಗವಾಗಿ ಅಂಗಡಿ-ಮುಂಗಟ್ಟುಗಳು ಸುಣ್ಣ, ಬಣ್ಣ, ತಳಿರು-ತೋರಣಗಳಿಂದ ಸಿಂಗಾರಗೊಳ್ಳುತ್ತಿವೆ. ಅದರಲ್ಲೂ ವಿಶೇಷವಾಗಿ ಎಣ್ಣೆ ಮಾರಾಟದ ಅಂಗಡಿಗಳು ಕಣ್ಮನಸೆಳೆಯುತ್ತಿವೆ. ಈ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಎಣ್ಣೆ ಮಾರಾಟಕ್ಕೆ ಏಳುಕೊಳ್ಳದ ನಾಡು ಸಾಕ್ಷಿಯಾಗುತ್ತದೆ.

ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಭಕ್ತರಿಗೆ ಯಾವ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ. ಎಲ್ಲರೂ ಜಾತ್ರೆ ಸುಗಮವಾಗಿ ನಡೆಯಲು ಸಹಕಾರ ಕೊಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದ್ದಾರೆ.

ನಾಡಿನಲ್ಲಿ ದೊಡ್ಡ ನವರಾತ್ರಿ ಉತ್ಸವ ನಡೆಯುವ ಸ್ಥಳಗಳಲ್ಲಿ ಯಲ್ಲಮ್ಮನಗುಡ್ಡವೂ ಒಂದು. ಸೌಹಾರ್ದ, ಸಡಗರದಿಂದ ನವರಾತ್ರಿ ಉತ್ಸವ ಆಚರಣೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ

ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ಶುಚಿತ್ವಕ್ಕೆ ಒತ್ತು ಕೊಡುವ ಜತೆಗೆ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿದ್ದೇವೆ ಹಾಗೂ ಶುದ್ದ ಕುಡಿಯುವ ನೀರು, ಬೆಳಕಿನ ವೈವಸ್ಥೆ , ಧರ್ಶನಕ್ಕೆ ಸರತಿ ಸಾಲು, ವಸತಿ ಹಾಗೂ ಭಕ್ತರು ನಿಗದಿತ ಸ್ಥಳದಲ್ಲೇ ದೀಪಕ್ಕೆ ಎಣ್ಣೆ ಹಾಕಿ ಸಹಕರಿಸಬೇಕು. ಎಲ್ಲೆಂದರಲ್ಲಿ ಎಣ್ಣೆ ಹಾಕಿ ಗಲೀಜು ಸೃಷ್ಟಿಸಬಾರದು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ

ಅಶೋಕ ದುಡಗುಂಟಿ ತಿಳಿಸಿದರು.

ಜಾತ್ರೆಯಲ್ಲಿ ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು.

ಎಂದು ಬೆಳಗಾವಿ ಎಸ್ ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ಯಲ್ಲಮ್ಮನಗುಡ್ಡದಲ್ಲಿ ನಡೆಯುವ ನವರಾತ್ರಿ ಜಾತ್ರೆಗೆ ಮಹಾರಾಷ್ಟ್ರದ ಭಕ್ತರೇ ಹೆಚ್ಚಾಗಿ ಬರುತ್ತಾರೆ. ಹೀಗಾಗಿ ಬೆಳಗಾವಿ ಕೇಂದ್ರ ಮತ್ತು ನಗರ ಸಾರಿಗೆ ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ 24 ತಾಸು ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ, ಕೆ.ಎಲ್.ಗುಡೆನ್ನವರ ಹೇಳಿದ್ದಾರೆ. 

Related Articles

Back to top button