*ನಾರಾಯಣ ಗುರುಗಳು ತೋರಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು: ಸಾಹಿತಿ ರವಿ ಕೋಟಾರಗಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾರಾಯಣ ಗುರುಗಳು ಸಮಾಜ ಸುಧಾರಕರು, ಅಸ್ಪೃಶ್ಯತೆ ನಿವಾರಕ ಮತ್ತು ಮಹಿಳಾವಾದಿಗಳಾಗಿದ್ದರು. ನಾರಾಯಣ ಗುರುಗಳ ಜಯಂತ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿಗಳಾದ ರವಿ ಕೋಟಾರಗಸ್ತಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ (ಸೆ.21) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲಘಟ್ಟದಲ್ಲಿ ಅನಿಷ್ಟ ಪದ್ಧತಿಗಳಾದ ಜಾತಿ ಬೇಧ, ಅಸ್ಪೃಶ್ಯತೆ, ಮಹಿಳೆಯರ ಮೇಲೆ ದೌರ್ಜನ್ಯ, ಕೆಳವರ್ಗದ ಜನರ ಮೇಲಿನ ದೌರ್ಜನ್ಯಗಳು ನಿರಂತರ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಅನಿಷ್ಟ ಪದ್ಧತಿಗಳನ್ನು ದಿಕ್ಕರಿಸಿ ಸಮಸಮಾಜ ನಿರ್ಮಾಣ ಮಾಡಲು ಬಂದವರು ನಾರಾಯಣ ಗುರುಗಳು. ಬಸವಣ್ಣ ಮತ್ತು ಬುದ್ಧನನ್ನು ಒಂದೆ ಆತ್ಮದಲ್ಲಿ ನೋಡಿದ ಹಾಗೆ ನಾವು ನಾರಾಯಣ ಗುರುಗಳನ್ನು ಕಾಣಬಹುದು. ನಾರಾಯಣ ಗುರುಗಳ ಕ್ರಾಂತಿಯಿಂದಾಗಿ ದೌರ್ಜನ್ಯಕ್ಕೆ ಒಳಗಾದ ಜನರು ದೌರ್ಜನ್ಯದಿಂದ ಮುಕ್ತಿ ಪಡೆದು ಸುಖ ಜೀವನ ನಡೆಸುತ್ತಿದ್ದಾರೆ ಎಂದರು.
ಸಮಾಜ ಸುಧಾರಕರಾದ ನಾರಾಯಣ ಗುರುಗಳ ಬಗ್ಗೆ ಎಲ್ಲ ಜನರು ಅಧ್ಯಯನ ಮಾಡಿ ಅವರು ಮಾಡಿದಂತಹ ಕ್ರಾಂತಿಗಳನ್ನು ತಿಳಿದುಕೊಳ್ಳಬೇಕು. ಅವರು ಮಾಡಿದಂತಹ ಸಮಾಜಮುಖಿ ಕೆಲಸಗಳನ್ನು ನಾವು ಮುಂದು ವರೆಸಿಕೊಂಡು ಹೋಗಬೇಕು. ಕೆಳ ವರ್ಗದ ಜನರಿಗೆ ದೇವಸ್ಥಾನ ಪ್ರವೇಶ ನಿರ್ಬಂಧ ಇದ್ದಾಗ ನಾರಾಯಣ ಗುರುಗಳು ತಾವೆ ಖುದ್ದಾಗಿ ಶಿವನ ದೇವಾಲಯಗಳನ್ನು ಸ್ಥಾಪಿಸಿ ಎಲ್ಲ ಸಮುದಾಯದ ಜನರನ್ನು ಕೂಡಿಸುತ್ತಾರೆ. ನಮ್ಮೊಳಗೆ ದೇವರಿದ್ದಾನೆ ಎಂಬ ಸಂದೇಶವನ್ನು ಸಾರಿದವರು. ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು ಎಲ್ಲರಿಗೆ ತಿಳಿಸಿಕೊಟ್ಟವರು ನಾರಾಯಣ ಗುರುಗಳು ಎಂದು ಹೇಳಿದರು.
ತಮ್ಮ ಕಾಲಾವದಿಯಲ್ಲಿ 79 ದೇವಸ್ಥಾನಗಳನ್ನು ಸ್ಥಾಪಿಸಿ ಎಲ್ಲ ಸಮಾಜದವರಿಗೆ ಪ್ರವೇಶ ಕಲ್ಪಸಿಕೊಟ್ಟರು. ಶೈಕ್ಷಣಿಕ ಮಟ್ಟ, ಬೌದ್ಧಿಕ ಮಟ್ಟ ಬೆಳೆಯುವ ಸಲುವಾಗಿ ತಾವೆ ಶಾಲೆಗಳನ್ನು ಸ್ಥಾಪಿಸುತ್ತಾರೆ. ಎಲ್ಲ ಸಮಾಜದವರಿಗೆ ಸಂಸ್ಕೃತವನ್ನು ಕಲಿಸುತ್ತಾರೆ. ಹೀಗೆ ಅವರು ಮಾಡಿದ ಕ್ರಾಂತಿಯ ಪ್ರತಿಫಲವಾಗಿ ಕೇರಳ ಅಕ್ಷರತೆಯಲ್ಲಿ ಅತಿ ಹೆಚ್ಚು ಪ್ರಮಾಣವಿರಲು ಕಾರಣವಾಗಿದೆ ಎಂದು ಸಾಹಿತಿಗಳಾದ ರವಿ ಕೋಟಾರಗಸ್ತಿ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಮಾತನಾಡಿ ನಮ್ಮ ಸಮಾಜ ಅಸ್ಪೃಶ್ಯತೆಯಿಂದ, ಶೋಷಣೆಯಿಂದ ಘನಗೋರ ಕೃತ್ಯಗಳಲ್ಲಿ ತೊಡಗಿರುವಂತಹ ವಾತಾವರಣದಲ್ಲಿ ಸಮಾಜ ಸುಧಾರಕರಾಗಿ ಅವತರಿಸಿ ಬಂದಂತವರು ಬ್ರಹ್ಮಶ್ರೀ ನಾರಾಯಣ ಗುರುಗಳು, ಅವರ ವ್ಯಕ್ತಿತ್ವ ಅಂತರಾಷ್ಟ್ರೀಯ ಮಟ್ಟಕ್ಕೂ ಮಾದರಿಯಾಗಿದೆ. ಥಿಯಾಸಾಫಿಕಲ್ ನ ಅಧ್ಯಕ್ಷರಾದ ಅನಿಬೆಸೆಂಟ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸೇವೆ ಎಂಬುದು ವಿಶಾಲವಾದದದ್ದು, ಯೋಗದ ಜೀವನದಲ್ಲಿ ಪತಂಜಲಿಯಂತೆ, ಮಾನವಿತೆಯಲ್ಲಿ ಯೇಸುವಿನಂತೆ, ಅಹಿಂಸೆಯಲ್ಲಿ ಬುದ್ಧನಂತೆ ಇದ್ದರು ಎಂದಿದ್ದಾರೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಸುಧೀರಕುಮಾರ ಸಾಲಿಯಾನ ಮಾತನಾಡಿ ಸಮಾಜದಲ್ಲಿ ಅಸಮಾನತೆ ತಾಂಡವಾಡುವ ಸಮಯದಲ್ಲಿ ಯಾರಾದರು ಒಬ್ಬ ಮಹಾನ ವ್ಯಕ್ತಿ ಹುಟ್ಟಿ ಬರುತ್ತಾರೆ, ಹಾಗೆ ಆ ಕಾಲ ಘಟ್ಟದಲ್ಲಿ ಹುಟ್ಟಿ ಸಮಸಮಾಜ ನಿರ್ಮಾಣ ಮಾಡಲು ಹುಟ್ಟಿ ಬಂದವರು ನಾರಾಯಣ ಗುರುಗಳು, ಎಲ್ಲರು ಅವರನ್ನು ಅನುಸರಿಸಬೇಕು, ನಾರಾಯಣ ಗುರುಗಳು ಯಾವುದೇ ಜಾತಿ ಸಮುದಾಯಗಳನ್ನು ದೂಡಲಿಲ್ಲಾ ಅವರು ನಮ್ಮನ್ನು ದೂಡಿದರು, ದೇವರು ಎಲ್ಲಿ ಇಲ್ಲಾ ನಮ್ಮೊಳಗಿದ್ದಾನೆ. ನಮ್ಮಲ್ಲಿನ ದೇವರನ್ನು ತಿಳಿದುಕೊಂಡಾಗ ನಮ್ಮಲ್ಲಿ ಸಮಾನತೆ ಕಂಡು ಬರುತ್ತದೆ. ಜೀವನದಲ್ಲಿ ಒಗ್ಗಟ್ಟಿರಲಿ ಎಂದು ಗುರುಗಳು ತಿಳಿಸಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರಗಳ ತೋರಿಸಿಕೊಟ್ಟ ಹಾದಿಯಲ್ಲಿ ನಾವು ಸಾಗಿದರೆ ನಮ್ಮ ಜೀವನಕ್ಕೆ ಒಂದು ಗೌರವ ಸಿಗುತ್ತದೆ ಎಂದು ಹೇಳಿದರು.
ಬಿಲ್ಲವ ಸಂಘದ ಜಿಲ್ಲಾ ಕಾರ್ಯದರ್ಶಿ ಸುಜನಕುಮಾರ ಮಾತನಾಡಿ ನಾರಾಯಣ ಗುರುಗಳ ಬಗ್ಗೆ ಯಾರಿಗು ಗೊತ್ತಿರಲಿಲ್ಲ, ಸರ್ಕಾರ ಗುರುಗಳ ಜಯಂತಿ ಆಚರಣೆ ಮಾಡುವುದರಿಂದಾಗಿ, ಎಲ್ಲರಿಗು ಅವರ ಆದರ್ಶಗಳು ಅವರು ಮಾಡಿದ ಕ್ರಾಂತಿ ಅವರು ತೋರಿಸಿಕೊಟ್ಟ ದಾರಿಗಳ ಬಗ್ಗೆ ಎಲ್ಲ ಜನರು ತಿಳಿದುಕೊಳ್ಳಬಹುದಾಗಿದೆ. ತಳ ಸಮುದಾಯದ ಜನರಿಗೆ ದೇವಸ್ಥಾನದ ಪ್ರವೇಶ ಇಲ್ಲದೇ ಇದ್ದಾಗ ನಾರಾಯಣ ಗುರುಗಳು ಅವರೆ ಗುಡಿಗಳನ್ನು ನಿರ್ಮಿಸಿ ಎಲ್ಲ ಜನರಿಗೆ ಅವಕಾಶ ಕಲ್ಪಿಸಿದರು. ಮೂಢನಂಬಿಕೆಗಳನ್ನು ದಿಕ್ಕರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ನಮ್ಮ ಸಮಾಜ ಸಂಘಟಿತವಾಗಬೇಕು. ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂದು ತಿಳಿಸಿದರು
ಬಿಲ್ಲವ ಸಂಘದ ಜಿಲ್ಲಾ ಅಧ್ಯಕ್ಷ ಸುನೀಲ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ, ವಿಜಯ ಸಾಲಿಯಾನ ಹಾಗೂ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತಿತರಿದ್ದರು.