
ಪ್ರಗತಿವಾಹಿನಿ ಸುದ್ದಿ: ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಾಯಿಯೇ ಕಂದಮ್ಮನನ್ನು ಕಾಲುವೆಗೆ ಎಸೆದು ಕೊಲೆಗೈದಿರುವ ಘೋರ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ಈ ಘಟನೆ ನಡೆದಿದೆ. ಪ್ರಿಯಾಂಕಾ ದೇವಿ ಎಂಬ ಮಹಿಳೆ ತನ್ನ ಎರಡು ತಿಂಗಳ ಹೆಣ್ಣು ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಪ್ರಿಯಾಂಕಾ ಪತಿ ಸರೋಜ್ ಕುಮಾರ್ ಖಾಸಗಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಬಿಹಾರ ಮೂಲದ ದಂಪತಿ ತೋರಣಗಲ್ ನಲ್ಲಿ ವಾಸವಾಗಿದ್ದರು.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೆಯದೂ ಹೆಣ್ಣು ಮಗುವೆಂದು ತಾಯಿಯೇ ಮಗುವನ್ನು ಕಾಲುವೆಗೆ ಎಸೆದು ಹತ್ಯೆಗೈದಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ಪೊಲೀಸರ ಮುಂದೆ ಕಣ್ಣೀರಿಟ್ಟು ನಾಟಕವಾಡಿದದಳೆ. ಪತಿ ತೋರಣಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ತನಿಖೆ ನಡೆಸಿದ ಪೊಲೀಸರು ಸಿಸಿಕ್ಯಾಮರಾ ಪರಿಶೀಲಿಸಿದಾಗ ತಾಯಿಯೇ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾಳೆ.