*ಕಾವೇರಿ ಆರತಿಗೆ ರೈತರ ವಿರೋಧವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ರೈತರ ಒಳಿತಿಗಾಗಿ ಕಾವೇರಿ ಮಾತೆಯನ್ನು ಪೂಜಿಸಿ, ಪಾರ್ಥಿಸುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ರೈತರ ವಿರೋಧವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಬುಧವಾರ ಈ ರೀತಿ ಉತ್ತರಿಸಿದರು.
ಕಾವೇರಿ ಆರತಿಗೆ ರೈತರ ವಿರೋಧವಿದೆ ಎಂದು ಕೇಳಿದಾಗ, “ರೈತರ ವಿರೋಧ ಇದೆ ಎಂದು ಯಾರು ಹೇಳಿದರು? ಪೂಜೆ ಮಾಡಲು ಯಾರಾದರೂ ವಿರೋಧ ಮಾಡುತ್ತಾರಾ? ನೀವು ವಿರೋಧ ಮಾಡಬಹುದು” ಎಂದು ತಿಳಿಸಿದರು.
“ಕೆಆರ್ ಎಸ್ ನಲ್ಲಿ ಈ ಬಾರಿ ಸಾಂಕೇತಿಕವಾಗಿ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಿದ್ದೇನೆ. ನಾವು ದೊಡ್ಡದಾಗಿ ಮಾಡಬೇಕು ಎಂದುಕೊಂಡಿದ್ದ ಜಾಗದಲ್ಲಿ ಈ ಬಾರಿ ಕಾರ್ಯಕ್ರಮ ಮಾಡುತ್ತಿಲ್ಲ” ಎಂದು ತಿಳಿಸಿದರು.
ನೇರ, ನಿಷ್ಠುರ ನಡೆಯ ಕ್ರಾಂತಿಕಾರಿ ಸಾಹಿತಿ ಎಸ್.ಎಲ್. ಬೈರಪ್ಪ
ಸಾಹಿತಿ ಎಸ್.ಎಲ್. ಬೈರಪ್ಪ ಅವರ ನಿಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಎಸ್.ಎಲ್. ಬೈರಪ್ಪ ಅವರು ಕ್ರಾಂತಿಕಾರಿ ಸಾಹಿತಿಗಳು. ಯಾರಿಗೂ ಹೆದರದೆ ನೇರ, ನಿಷ್ಠುರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಈ ಹಿಂದೆ ಕನಕಪುರದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ ಎಲ್ಲಾ ರಂಗದ ವ್ಯಕ್ತಿಗಳಿಗೂ ಮಾರ್ಗದರ್ಶನ ನೀಡುವಂತಹ ವ್ಯಕ್ತಿತ್ವ ಇವರದ್ದಾಗಿತ್ತು. ತಮ್ಮಪಾಡಿಗೆ ಕೆಲಸ ಮಾಡುತ್ತಾ ಹೋದವರು. ಇಡೀ ಸಾಹಿತ್ಯ ಕ್ಷೇತ್ರದಲ್ಲಿ ಇವರ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ” ಎಂದರು.
“ಬೈರಪ್ಪ ಅವರ ಆತ್ಮಕ್ಕೆ ಶಾಂತಿ ದೊರಕಲಿ. ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತದೆ. ಅವರ ಕುಟುಂಬ ವರ್ಗ ಸೇರಿದಂತೆ ಅಭಿಮಾನಿಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.
ಸರ್ಕಾರದಿಂದ ವಿಶೇಷ ಗೌರವ ನೀಡಲಾಗುವುದೇ ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಏಕಾಏಕಿ ತೀರ್ಮಾನ ಮಾಡಲು ಆಗುವುದಿಲ್ಲ. ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು. ಹೀಗಾಗಿ ಮುಖ್ಯಮಂತ್ರಿಗಳು ಈ ವಿಚಾರವಾಗಿ ತೀರ್ಮಾನ ಮಾಡುತ್ತಾರೆ” ಎಂದರು.