

ದುಬೈ: ಅಂತಿಮ ಕ್ಷಣದವರೆಗೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಹಣಾಹಣಿಯಲ್ಲಿ ಭಾರತ ತಂಡ ತಿಲಕ್ ವರ್ಮ (69*ರನ್, 53 ಎಸೆತ, 3 ಬೌಂಡರಿ, 4 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿತು. ಈ ಮೂಲಕ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಅಲ್ಲದೇ, ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಆಡಿದ ಮೂರು ಪಂದ್ಯಗಳಲ್ಲೂ ಜಯ ದಾಖಲಿಸಿತು.
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಪಾಕ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
ಶಹಿಜಾದ ಫರ್ಹಾನ್ (57ರನ್ 38 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಫಖಾರ್ ಜಮಾನ್ (46ರನ್, 35 ಎಸೆತ, 2 ಬೌಂಡರಿ, 2 ಸಿಕ್ಸರ್) ಉತ್ತಮ ಆರಂಭದ ನಡುವೆಯೂ ಪಾಕಿಸ್ತಾನ ತಂಡ, ಭಾರತದ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ (30ಕ್ಕೆ 4) ಹಾಗೂ ವರುಣ್ ಚಕ್ರವರ್ತಿ (30ಕ್ಕೆ 2) ಮಾರಕ ದಾಳಿಗೆ ನಲುಗಿ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನ ಕಂಡಿತು. ಒಂದು ಹಂತದಲ್ಲಿ 13ನೇ ಓವರ್‌ಗಳಲ್ಲಿ ಚಾಲ್ತಿಯಲ್ಲಿ 113 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡ, ಕಡೆ 33 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿತು.
ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ತಿಲಕ್ ವರ್ಮ (69*ರನ್, 53 ಎಸೆತ, 3 ಬೌಂಡರಿ, 4 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ಸಂಜು ಸ್ಯಾಮ್ಸನ್ (24ರನ್) ಹಾಗೂ ಶಿವಂ ದುಬೆ (33ರನ್) ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ ಭಾರತ ತಂಡ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 150 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಲೀಗ್ ಹಾಗೂ ಸೂಪರ್ 4ರ ಹಂತದಲ್ಲೂ ಪಾಕಿಸ್ತಾನ ವಿರುದ್ಧ ಜಯ ದಾಖಲಿಸಿದ್ದ ಭಾರತ ತಂಡ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲೂ ಜಯ ದಾಖಲಿಸಿ ಟೂರ್ನಿಯಲ್ಲಿ ಅಜೇಯ ದಾಖಲೆ ಉಳಿಸಿಕೊಂಡಿತು.