
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಗೈರಾಗಿದ್ದ 9 ಸಮೀಕ್ಷಕರನ್ನು ಅಮಾನತುಗೊಳಿಸಿ ಸರ್ಕಾರ ಕ್ರಮ ಕೈಗೊಂಡಿದೆ.
ಮೈಸೂರು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೆ, ಅಧಿಕಾರಿಗಳ ದೂರವಾಣಿ ಕರೆಯನ್ನು ಕೂಡಾ ಸ್ವೀಕರಿಸದೆ ಬೇಜವಾಬ್ದಾರಿ ಹಾಗೂ ಅತೀವ ನಿರ್ಲಕ್ಷ್ಯ ತೋರಿದ 8 ಸಹ ಶಿಕ್ಷಕರನ್ನು ಜಿಪಂ ಸಿಇಒ ಎಸ್ ಯುಕೇಶ್ ಕುಮಾರ್ ಅವರ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಕೆಯ ಉಪನಿರ್ದೇಶಕ ಎಸ್ಟಿ ಜವರೇಗೌಡ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೊಪ್ಪಳದಲ್ಲಿ ಸಮೀಕ್ಷೆಗೆ ಗೈರುಹಾಜರಾದ ಕುಷ್ಟಗಿ ತಾಲೂಕಿನ ಜೂಲಕುಂಟಿ ಗ್ರಾಮದ ಶಿಕ್ಷಕ ರಾಮಪ್ಪ ತಳವಾರ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಅವರು ಭಾನುವಾರ ಆದೇಶಿಸಿದ್ದಾರೆ.
ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಮೀಕ್ಷೆ ಕಾರ್ಯಕ್ಕೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.
ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.