*ಅಭಿವೃದ್ದಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಕಂಗ್ರಾಳಿ ಕೆ.ಎಚ್.ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ.ಎಚ್ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಾಮ ಪಂಚಾಯತ್ ಹಾಗೂ ಗ್ರಂಥಾಲಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸುಮಾರು 1.35 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಒದಗಿಸಲಿರುವ ಗ್ರಂಥಾಲಯ ಸಮರ್ಪಕವಾಗಿ ಬಳಕೆಯಾಗಲಿ ಎಂದು ಆಶಿಸುತ್ತೇನೆ ಎಂದರು.
ರಸ್ತೆ, ಶಾಲೆ, ಅಭಿವೃದ್ಧಿಗೆ ಯಾವುದೇ ಹಿಂಜರಿಕೆ ಮಾಡುವುದಿಲ್ಲ. ಗ್ರಾಮಸ್ಥರು ಸೂಕ್ತವಾಗಿ ಬಳಸಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಎರಡೂವರೆ ಕೋಟಿ ರೂ ನೀಡಲಾಗಿದೆ. ಭಾಷೆ, ಜಾತಿ ರಾಜಕಾರಣ ಮಾಡಿಲ್ಲ. ಕ್ಷೇತ್ರದಲ್ಲಿ 140 ಮಂದಿರ ಅಭಿವೃದ್ಧಿ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ 2-3 ಮಂದಿರ ನಿರ್ಮಾಣ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೇವಲ ಅಭಿವೃದ್ಧಿಗಷ್ಟೇ ನನ್ನ ಆದ್ಯತೆ, ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಅಭಿವೃದ್ಧಿ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಆಗಷ್ಟೇ ಗಾಂಧಿ ಕಂಡಂತೆ ರಾಮರಾಜ್ಯ ಆಗಲು ಸಾಧ್ಯ, ರಾಜೀವ್ ಗಾಂಧಿ ಕನಸು ನನಸಾಗಲಿದೆ. ದುಡಿಯುವ ಕೈಗಳಿಗೆ ನರೇಗಾ ಶಕ್ತಿ ನೀಡಿದೆ. ಗ್ರಾಮ ಪಂಚಾಯಿತಿಗೆ ಹೆಚ್ಚು ಅಧಿಕಾರ ನೀಡುವ ಮೂಲಕ ಸ್ಥಳೀಯರಿಗೆ ಅಧಿಕಾರ ನೀಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಹೇಳಿದರು.

ಗ್ರಾಮದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ಗ್ರಂಥಾಲಯ ಉತ್ತಮ ಗುಣಮಟ್ಟದಲ್ಲಿದ್ದು, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಯೋಗಿಸಿಕೊಳ್ಳಿ, ನಿಮ್ಮ ಮಕ್ಕಳನ್ನು ಶಿಕ್ಷಕರು, ಎಂಜಿನಿಯರ್ ಡಾಕ್ಟರ್, ಉದ್ಯಮಿಗಳನ್ನಾಗಿ ಮಾಡಿ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ, ಶಿಕ್ಷಣದ ಜೊತೆಗೆ ಆರೋಗ್ಯದ ಬಗ್ಗೆಯೂ ನಿಗಾವಹಿಸಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಕಾಡಾ ಅಧ್ಯಕ್ಷ ಯುವರಾಜ್ ಕದಂ, ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ದೇವಸ್ಥಾನಗಳಿಗೆ ಎರಡೆರಡು ಕೋಟಿ ರೂ ಬರುತ್ತಿದೆ. ಮೊದಲು 5 ಲಕ್ಷವೂ ಬರುತ್ತಿರಲಿಲ್ಲ. ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ, ರಾಜಹಂಸಗಡ ಕೋಟೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಪರ್ಯಾಯವೇ ಇಲ್ಲ. ಕ್ಷೇತ್ರದ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ರಾಜು ಸೇಠ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೊಡ್ಡವ್ವ ಮಾಳಗಿ, ಉಪಾಧ್ಯಕ್ಷರಾದ ಯಲ್ಲಪ್ಪ ಪಾಟೀಲ, ಮನೋಹರ್ ಬೆಳಗಾಂವ್ಕರ್, ಪಿಡಿಒ ಜಿ.ಎಸ್.ನಾಯಿಕ್, ಕೆಂಪಣ್ಣ ಸನದಿ, ಸಿಪಿಆಯ್ ಔಟಿ, ಬಾಳು ಪಾಟೀಲ, ರಮೇಶ್ ಕಾಂಬಳೆ, ಸಾಗರ್ ಪಾಟೀಲ, ಆನಂದ ಭಜಂತ್ರಿ, ವಿನಾಯಕ್ ಕೋಲಕಾರ್, ಜ್ಯೋತಿ ಪಾಟೀಲ, ಲತಾ ಪಾಟೀಲ, ವೀಣಾ ಮುತಗೇಕರ್, ಕಮಲಾ ಪಾಟೀಲ, ಮೋಹನ್ ಕಾಂಬಳೆ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.