
ಪ್ರಗತಿವಾಹಿನಿ ಸುದ್ದಿ: ಪೋಲಿಸ್ ಇಲಾಖೆಯಲ್ಲೂ ವಯೋಮಿತಿ ಸಡಲಿಕೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದಿರುವ ಗೃಹ ಸಚಿವ ಪರಮೇಶ್ವರ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು ಜಿ. ಪರಮೇಶ್ವರ್ ಅವರು, ಪೊಲೀಸ್ ಇಲಾಖೆಯ ನೇಮಕಾತಿ ವಿಚಾರದಲ್ಲಿ ಶಾಶ್ವತ ವಯೋಮಿತಿ ಸಡಿಲಿಕೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಮಾಹಿತಿಯನ್ನ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.
ಈಗಾಗಲೇ ಒಂದು ಸಲಕ್ಕೆ ಅನ್ವಯ ಆಗುವ ರೀತಿಯಲ್ಲಿ ವಯೋಮಿತಿಯನ್ನ ಸಡಿಲಿಕೆ ಮಾಡಲಾಗಿದೆ. 2027ರವರೆಗೆ ವಯೋಮಿತಿಯನ್ನ ಈಗಾಗಲೇ ಸಡಿಲಿಕೆ ಮಾಡಿದ್ದೇವೆ. ಈಗ ನಮ್ಮ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಹ ವಯೋಮಿತಿ ಸಡಿಲಿಕೆ ಮಾಡಲು ನಿರ್ಧಾರ ಮಾಡಲಾಗಿದ್ದು, ಕಾನ್ಸ್ಟೇಬಲ್, ಪಿಎಸ್ಐ, ಎಸ್ಐ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಈ ವಯೋಮಿತಿ ಸಡಿಲಿಕೆ ಬಗ್ಗೆ ಚರ್ಚೆ ಆಗಿದೆ.
ಈ ವಯೋಮಿತಿ ಸಡಿಲಿಕೆಗೆ ಸಂಬಂಧಪಟ್ಟಂತೆ ಸದ್ಯಕ್ಕೆ ದೇಶದ ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಸಡಿಲಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನ ಪಡೆಯಲಾಗಿದೆ. ಎಲ್ಲಾ ರೀತಿಯಲ್ಲೂ ಪರಿಶೀಲನೆ ಮಾಡಿ ಮುಂದಿನ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.