Kannada NewsKarnataka NewsPolitics

*ಇತಿಹಾಸ ಸೃಷ್ಟಿಸಿರುವ ಕಾವೇರಿ ಆರತಿ ನಿಲ್ಲೋದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್* 

ಪ್ರಗತಿವಾಹಿನಿ ಸುದ್ದಿ: ಇದೇ‌ ಮೊದಲ ಬಾರಿಗೆ ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮಂಡ್ಯ ಜಿಲ್ಲೆ ಕೆ ಆರ್ ಎಸ್ ನಲ್ಲಿ ಐತಿಹಾಸಿಕ  ಕಾವೇರಿ ಆರತಿಯನ್ನು ಅಭೂತಪೂರ್ಣವಾಗಿ ನೆರವೇರಿಸಿದ ಪಂಡಿತ, ಪುರೋಹಿತರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸನ್ಮಾನಿಸಿದರು.

ಮಂಡ್ಯ ಜಿಲ್ಲೆ ಕೆಆರ್ ಎಸ್ ನ ಬೃಂದಾವನ ಉದ್ಯಾನದಲ್ಲಿ ಸತತ 5 ದಿನಗಳ ಕಾಲ ಕಾವೇರಿ ಆರತಿಯಲ್ಲಿ ಪಾಲ್ಗೊಂಡ 55 ಮಂದಿ ಅರ್ಚಕರನ್ನು ಶಿವಕುಮಾರ್ ಅವರು ಕುಮಾರಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಸರಕಾರಿ ನಿವಾಸದಲ್ಲಿ ಶುಕ್ರವಾರ ಫಲ, ತಾಂಬೂಲ, ವಸ್ತ್ರ ನೀಡಿ ಸಾಂಪ್ರದಾಯಿಕವಾಗಿ ಅಭಿನಂದಿಸಿದರು.

ತಮ್ಮನ್ನು ಸನ್ಮಾನಿಸಿ ಸತ್ಸಂಪ್ರದಾಯ ಮೆರೆದ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕಾವೇರಿ ಆರತಿ ಪ್ರಧಾನ ಅರ್ಚಕ ವಿಜಯಕುಮಾರ್ ಪಂಡಿತ್ ಅವರು ಆಶೀರ್ವದಿಸಿದರು.

ಕಾವೇರಿ ಆರತಿ ನಿಲ್ಲುವುದಿಲ್ಲ

Home add -Advt

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು,”ಕಾವೇರಿ ಆರತಿಯನ್ನು ನಿಲ್ಲಿಸುವುದಿಲ್ಲ,‌ ಮುಂದುವರೆಸುತ್ತೇವೆ.‌ ಪ್ರಯತ್ನಕ್ಕೆ ಸೋಲಾಗಬಹುದು ಪ್ರಾರ್ಥನೆಗೆ ಸೋಲಾಗುವುದಿಲ್ಲ.‌ ನಾವೆಲ್ಲರೂ ‌ಸೇರಿ ಪ್ರಾರ್ಥನೆ ಸಲ್ಲಿಸೋಣ.‌ ಆರತಿಗಾಗಿ ಸ್ಟೇಡಿಯಂ ಮಾದರಿ ಮಂಟಪ ನಿರ್ಮಾಣ‌‌ ಮಾಡೋಣ‌” ಎಂದರು.

“ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಕಾವೇರಿ ಆರತಿ ನಡೆಯಲಿದೆ. ಇದರಿಂದ ಪುರೋಹಿತರಿಗೆ, ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು. ನಾನು ಅಥವಾ ಇನ್ಯಾರೋ ಪುರೋಹಿತರಾಗಲು ಸಾಧ್ಯವಿಲ್ಲ. ನೀವೇ ಆ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ‌ಬೆಳಿಗ್ಗೆ ಹೊತ್ತು ಭಕ್ತಾಧಿಗಳು ಕಾವೇರಿಗೆ ಪೂಜೆ ಸಲ್ಲಿಸುವ ರೀತಿಯಲ್ಲೂ ವ್ಯವಸ್ಥೆ ಮಾಡಲಾಗುವುದು. ವಾರ ಪೂರ್ತಿ ಆರತಿ ಕಾರ್ಯಕ್ರಮ ನಡೆಯಬೇಕು ಎಂಬುದು ನನ್ನ ಆಸೆಯಾಗಿದೆ” ಎಂದರು.

“ಕಾವೇರಿ ಆರತಿ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಜೀವನದಿ ಕಾವೇರಿಗೆ ಪೂಜೆ ಸಲ್ಲಿಸುವ ಭಾಗ್ಯ ನಮಗೆ ಹಾಗೂ ನಿಮಗೆ ಸಿಕ್ಕಿದೆ. ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಲು ಕೆಲವರು ಅಡಚಣೆ ಮಾಡುತ್ತಿದ್ದಾರೆ. ಅಡಚಣೆ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ” ಎಂದರು.

“ಕಾವೇರಿ ಆರತಿ ಅತ್ಯುತ್ತಮವಾಗಿ ನೆರವೇರಿದೆ. ಮುಂದಕ್ಕೆ ಯಾವ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು, ಏನೇನು ತಪ್ಪುಗಳಾಗಿವೆ ಎಂಬುದನ್ನು ಗಮನಿಸಬೇಕು. ಇನ್ನೂ ಯಾವ ರೀತಿಯ ಧಾರ್ಮಿಕ ಕೆಲಸಗಳು ನೆರವೇರಬೇಕು ಎಂಬುದನ್ನು ಗಮನಿಸಬೇಕು. ಭಕ್ತಿ ಪ್ರಧಾನವಾಗಿ ಜನರ ಮನಸ್ಸಿಗೆ ಮುಟ್ಟುವಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಬೇಕು” ಎಂದರು.

“ವಾರಣಾಸಿಯ ಗಂಗಾ ಆರತಿಗೆ ಕಡಿಮೆಯಿಲ್ಲದಂತೆ ಇಲ್ಲೂ ಆರತಿ ನೆರವೇರಿದೆ. ಅಲ್ಲಿ ಯಾರು ಬೇಕಾದರೂ ವಿಗ್ರಹ ಮುಟ್ಟಬಹುದು. ಆದರೆ ದಕ್ಷಿಣ ಭಾರತದಲ್ಲಿ ಪದ್ದತಿ ಬೇರೆ ರೀತಿಯಿದೆ. ಮಡಿಯನ್ನು ಇಲ್ಲಿ ಕಾಪಾಡಿಕೊಂಡು ಬರಲಾಗಿದೆ” ಎಂದರು.

“ಕಾವೇರಿ ಮಾತೆ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಸ್ಥಳೀಯ ಪುರೋಹಿತರು ತಮ್ಮ ಪಾಂಡಿತ್ಯ ಬಳಸಿಕೊಂಡು ಇನ್ನೂ ಯಾವ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಬಹುದು ಎಂದು ಪರಿಶೀಲನೆ ನಡೆಸಿ” ಎಂದರು.

“ಊರಲ್ಲಿರುವ ಎಲ್ಲಾ ಎತ್ತುಗಳು ಬಸವ ಆಗಲು ಸಾಧ್ಯವಿಲ್ಲ. ಆದ ಕಾರಣಕ್ಕೆ ಉತ್ತಮ ಅಧಿಕಾರಿಯಾದ ರಾಮ ಪ್ರಸಾತ್ ಮೋಹನ್ ಅವರಿಗೆ ಇದರ ಜವಾಬ್ದಾರಿ ನೀಡಲಾಯಿತು. ಇವರ ಜೊತೆಗೆ ಸ್ಥಳೀಯ ಅಧಿಕಾರಿಗಳು ಕೈ ಜೋಡಿಸಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಕಾವೇರಿ ಮಾತೆಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ. ಪ್ರತಿವರ್ಷ ಉತ್ತಮ ಮಳೆ, ಬೆಳೆ ಬರಲಿ” ಎಂದು ಪ್ರಾರ್ಥಿಸಿದರು.

“ಕೊಡಗಿನಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುವ ತನಕ ಸುಮಾರು ಎರಡುವರೆ ಕೋಟಿ ಜನರ ಜೀವನಾಡಿಯಾಗಿ ಕಾವೇರಿ ಹರಿಯುತ್ತದೆ. ಕೃಷಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದಕ್ಕೂ ಕಾವೇರಿಯೇ ಆಧಾರ” ಎಂದರು.

ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಈ ಬಾರಿ ಐದು ದಿನಗಳ ಕಾಲ ಕಾವೇರಿ ಆರತಿ ಕಾರ್ಯಕ್ರಮವನ್ನು ನಡೆಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನವಾಗಿದ್ದ ಈ ಕಾವೇರಿ ಆರತಿ ರಾಜ್ಯದಲ್ಲಿ ಐತಿಹಾಸಿಕ ಸುಸಂಪ್ರದಾಯಕ್ಕೆ ನಾಂದಿಯಾಡಿತು. ಭಕ್ತಿ, ಸಂಸ್ಕೃತಿ, ಕಲೆ, ಸಂಗೀತ ಹಾಗೂ ವರ್ಣರಂಜಿತ ದೀಪಾಲಂಕಾರ ಪ್ರವಾಸಿಗರ ಮನಸ್ಸನ್ನು ಸೂರೆಗೊಂಡಿತು.

Related Articles

Back to top button