Karnataka NewsLatestPolitics

*ರಾಜ್ಯ ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಒಂದೇ ದಿನ 2000 ಕೋಟಿ ಮೊತ್ತದ ಅಭಿವೃದ್ಧಿ ಸಾಧ್ಯ ಆಗ್ತಿತ್ತಾ: ಬಿಜೆಪಿಯವರ ಸುಳ್ಳನ್ನು ಕೆದಕಿ ಪ್ರಶ್ನಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ಇದುವರೆಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13000 ಕೋಟಿ ಅನುದಾನ ನೀಡಿದೆ. ಈ ಹಣ ಕೊಟ್ಟಿದ್ದೂ ಸಿದ್ದರಾಮಯ್ಯ ಸರ್ಕಾರ. ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ರೈತರಿಗೆ 80 ಸಾವಿರ ಕೋಟಿ ಪರಿಹಾರ ಕೊಡ್ತಾ ಇರುವುದೂ ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಮುಖ್ಯಮಂತ್ರಿ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಪ್ಪಳ ವತಿಯಿಂದ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ರೂ. 2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ / ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಇಲಾಖಾ
ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ನುಡಿದಂತೆ ನಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಬಿಜೆಪಿ ತನ್ನ ಅವಧಿಯಲ್ಲಿ ಒಂದೇ ಒಂದು ಮನೆ ಕೊಡಲಿಲ್ಲ. ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಈ ಕಾರಣಕ್ಕೆ ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಕುಟುಕಿದರು.

ನಾವು ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ಹಣವನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ಹಾಕಿದ್ದೇವೆ. ಇದರಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ರಾಜ್ಯದ ಜನರ ತಲಾ ಆದಾಯ ಹೆಚ್ಚಾಗಿ ರಾಜ್ಯದ ಆರ್ಥಿಕತೆ ಪ್ರಗತಿ ಕಂಡಿದೆ ಎಂದರು.

Home add -Advt

ತಲಾ ಆದಾಯದಲ್ಲಿ ಇಡೀ ದೇಶದಲ್ಲಿ ಕನ್ನಡಿಗರೇ ನಂಬರ್ ಒನ್. ಇದು ನಮ್ಮ ಸರ್ಕಾರದ ಆರ್ಥಿಕ ಸಾಧನೆ. ತೆರಿಗೆ ಪಾವತಿಯಲ್ಲಿ ರಾಜ್ಯ ಇಡೀ ದೇಶದಲ್ಲಿ ನಂಬರ್ ಟು ಇದ್ದೇವೆ‌. ಇದು ನಮ್ಮ ಸರ್ಕಾರದ ಜಾತ್ಯತೀತ ಸಾಧನೆ ಎಂದರು.

ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದವರ ಪ್ರಗತಿಗಾಗಿ ಯೋಜನೆ ರೂಪಿಸಿದೆವು‌‌ ಹೀಗಾಗಿ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರು ಸೇರಿ ರಾಜ್ಯದ ಆರ್ಥಿಕತೆಯನ್ನು ಪ್ರಗತಿಗೆ ಕೊಂಡೊಯ್ದರು ಎಂದು ಮೆಚ್ಚುಗೆ ಸೂಚಿಸಿದರು.

ಕೊಪ್ಪಳ ಜಿಲ್ಲೆಯೊಂದರಲ್ಲೇ 9 ಕೋಟಿ 22 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಜಿಲ್ಲೆಗೆ 330 ಕೋಟಿ ಖರ್ಚಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 317776 ಫಲಾನುಭವಿಗಳಿಗೆ 1283 ಕೋಟಿ ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 275903 ಫಲಾನುಭವಿಗಳಿಗೆ 290 ಕೋಟಿ ಕೊಟ್ಟಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 1.96 ಕೋಟಿ ಜನರಿಗೆ 320 ಕೋಟಿ ಮೊತ್ತದ 39.097 ಮೆಟ್ರಿಕ್ ಟನ್ ದವಸಧಾನ್ಯಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದ ಸಿಎಂ ಬೊಕ್ಕಸ ಖಾಲಿ ಆಗಿದ್ದರೆ ಇಷ್ಟೊಂದು ಪ್ರಮಾಣದ ಹಣವನ್ನು ಜನರಿಗೆ ಕೊಡಲಾಗುತ್ತಿತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿಯವರ ಮನೆ ದೇವರೇ ಸುಳ್ಳು. ಆದ್ದರಿಂದ ಅವರ ಸುಳ್ಳುಗಳಿಗೆ ರಾಜ್ಯದ ಜನತೆ ತಮ್ಮ ತಲೆಯನ್ನು, ಬುದ್ದಿಯನ್ನು ಒತ್ತೆ ಇಡುವುದಿಲ್ಲ ಎನ್ನುವ ಭರವಸೆ ನನಗಿದೆ ಎಂದರು.

GST ಯಲ್ಲಿ 8 ವರ್ಷ ಸುಲಿಗೆ ಬಳಿಕ ಫೋಸು ಕೊಡ್ತಾರೆ

GST ಜಾರಿ ಮಾಡಿದ ಪರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಎಂಟು ವರ್ಷಗಳ ಕಾಲ ನಿರಂತರವಾಗಿ ರಾಜ್ಯದ ಮತ್ತು ದೇಶದ ಜನರ ಸುಲಿಗೆ ನಡೆಸಿತು. ನಾವು GST ಸುಲಿಗೆ ವಿರೋಧಿಸಿ ಸರಳೀಕರಣಕ್ಕೆ ಆಗ್ರಹಿಸಿದ್ದೆವು. ಎಂಟು ವರ್ಷದ ಸುಲಿಗೆ ಬಳಿಕ ಸುಲಿಗೆ ನಡೆಸಿದವರೇ ಸರಳೀಕರಣದ ಕ್ರೆಡಿಟ್ ಗಾಗಿ ಒದ್ದಾಡುತ್ತಿದ್ದಾರೆ. ಈಗಲೂ ಕೇಂದ್ರದಿಂದ 15 ಸಾವಿರ ಕೋಟಿ ರೂಪಾಯಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. 15 ನೆ ಹಣಕಾಸು ಆಯೋಗದಿಂದಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿಯ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಮಂತ್ರಿಗಳು ಪಾರ್ಲಿಮೆಂಟಿನಲ್ಲಿ ತುಟಿ ಬಿಚ್ಚಿ ಪ್ರಶ್ನಿಸಲಿಲ್ಲ ಎಂದರು‌ .

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾಲ್ಕು ಬಾರಿ ದೆಹಲಿಗೆ ಹೋಗಿ ಅನ್ಯಾಯ ಸರಿ ಪಡಿಸಲು ಮನವಿ ಮಾಡಿದರೂ ಮೋದಿಯೂ ಮಾಡಲಿಲ್ಲ, ನಿರ್ಮಲಾ ಸೀತರಾಮನ್ ಅವರೂ ಅನ್ಯಾಯ ಸರಿ ಪಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಕ್ಕುಂಬಿ ಕೆರೆಗೆ ನೀರು ಹರಿಸಿದ್ದು ನಾವು. ಈಗ ಯಲಬುರ್ಗಾ ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ 650 ಕೋಟಿ ಹಣ ಕೊಡುತ್ತಿದ್ದೇವೆ. ಇದೂ ನಮ್ಮ-ನಿಮ್ಮ ಸರ್ಕಾರದ್ದೇ ಹಣ ಎಂದರು.

Related Articles

Back to top button