*ಹಾಲ ಶುಗರ್ಸ್ ಸಿಬ್ಬಂದಿಗೆ ಬಂಪರ್ ಬೋನಸ್: ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಮುಚ್ಚುವ ಹಂತದಲ್ಲಿದ್ದ ಕಾರ್ಖಾನೆ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದಕ್ಕೆಲ್ಲ ನಮ್ಮ ಕಾರ್ಖಾನೆಯ ಸಿಬ್ಬಂದಿಯ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮವೆ ಕಾರಣ. ಅವರೇ ನಮ್ಮ ಶಕ್ತಿ, ಅವರಿಗೆ ದಸರಾ ಮತ್ತು ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳಿನ ಬೋನಸ್ ನೀಡಲು ನಮ್ಮ ಆಡಳಿತ ಮಂಡಳಿ ತಿರ್ಮಾನಿಸಿದೆ. ಕಳೆದ ೨೫ ವರ್ಷದಲ್ಲಿ ಇದು ಗರಿಷ್ಠ ಬೋನಸ್ ಆಗಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ರವಿವಾರ ನಗರದ ಹೊರವಲಯದಲ್ಲಿರುವ ಶ್ರೀ ಹಾಲಸಿದ್ಧನಾಥ ಕೋ-ಆಪರೇಟಿವ್ ಶುಗರ್ ಫ್ಯಾಕ್ಟರಿಯ ೨೦೨೫-೨೬ ಸಾಲಿನ ಹಬೆಜನಕದ ಅಗ್ನಿಪ್ರದಿಪನ ನೇರವೇರಿಸಿ ಅವರು ಮಾತನಾಡಿದರು. ಈ ಹಂಗಾಮಿನಲ್ಲಿ ಕಾರ್ಖಾನೆಯನ್ನು ೧೨೦ ರಿಂದ ೧೫೦ ದಿನಗಳ ವರೆಗೆ ನಡೆಸುವ ಯೋಜನೆ ರೂಪಿಸಿದೆ, ಜತೆಗೆ ಪ್ರತಿದಿನ ೧೧ ಸಾವಿರ ಕಬ್ಬು ನುರಿಸಿ ೧೦ ಲಕ್ಷ ಸಕ್ಕರೆ ಚೀಲಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಾರ್ಖಾನೆ ಹಂತ ಹಂತವಾಗಿ ಬೆಳೆದು ನಿಂತಿದೆ. ಸಹಕಾರಿ ವಲಯದಲ್ಲಿ ರಾಜ್ಯದ ನಂಬರ್ ೧ಕಾರ್ಖಾನೆಯಾಗಿ ಮಾಡುವುದು ನಮ್ಮ ಗುರಿಯಾಗಿದೆ. ಕಾರ್ಖಾನೆಗೆ ಹೆಚ್ಚಿನ ಕಬ್ಬು ಕಳುಹಿಸಿ ಬರುವ ಹಂಗಾಮು ಯಶಸ್ವಿಗೊಳಿಸಿ ಎಂದು ಕಬ್ಬು ಬೆಳೆಗಾರ ರೈತರಿಗೆ ಮತ್ತು ಸದಸ್ಯರಿಗೆ ಕರೆ ನೀಡಿದರು.
ದಿವ್ಯಸಾನಿಧ್ಯ ವಹಿಸಿ ನಿಡಸೋಸಿಯ ಶ್ರೀ.ಮ.ನಿ.ಪ್ರ.ಡಾ.ಶ್ರೀ. ಶಿವಲಿಂಗೇಶ್ವರ ಮಹಾಸ್ವಾಮಿಜಿ ಸ್ವಾಮಿಜಿ ಮಾತನಾಡಿ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕಳೆದ ಹಲವು ವಷಗಳಿಂದಲೂ ನಾನು ಗಮನಿಸುತ್ತಿದ್ದೇನೆ, ಕಾರ್ಖಾನೆಯಲ್ಲಿ ಆಮೂಲಾಗ್ರ ಸುಧಾರಣೆಗಳೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಎಥೆನಾಲ್ ಘಟಕದ ಜತೆಗೆ ಕಾರ್ಖಾನೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆ ನಿಜವಾದ ಅರ್ಥದಲ್ಲಿ ಪ್ರಗತಿಯ ದಿಕ್ಕನ್ನು ಪಡೆದಿದೆ. ಕಟ್ಟುನಿಟ್ಟಿನ ನಿರ್ವಹಣೆ ಮತ್ತು ಪ್ರಾಮಾಣಿಕ ಸೇವೆಯಿಂದ ಮಾತ್ರ ಇದು ಸಾಧ್ಯವಾಗಿದೆ. ಕಾರ್ಖಾನೆ ಈ ಭಾಗದ ಕಬ್ಬು ಬೆಳೆಗಾರ ರೈತರಿಗೆ, ಸದಸ್ಯರಿಗೆ ಹಾಗೂ ಕಾರ್ಮಿಕರಿಗೆ ವರದಾನವಾಗಿದ್ದಲ್ಲದೆ, ಅವರ ಹಿತಾಶಕ್ತಿಗಳನ್ನು ಪೋಷಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದ ಅಗ್ರಗಣ್ಯ ಕಾರ್ಖಾನೆಯಾಗಿ ಗುರುತಿಸಲ್ಪಡಲಿ ಎಂದು ಹಾರೈಸಿದರು.
ಬೋನಸ್ ಘೋಷಣೆಯಾಗುತ್ತಿದ್ದಂತೆ ಸಿಬ್ಬಂದಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾದ್ಯಕ್ಷ ಪವನಕುಮಾರ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ, ಸುಕುಮಾರ ಪಾಟೀಲ, ಸಮೀತ ಸಾಸನೆ, ಜಯಕುಮಾರ ಖೋತ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ ಜಂಗಟೆ, ಸುಹಾಸ ಗೂಗೆ, ಗೀತಾ ಪಾಟೀಲ, ವೈಶಾಲಿ ನಿಕಾಡೆ, ರಾಜು ಗುಂದೆಶಾ, ಮಹಾಲಿಂಗ ಕೋಠಿವಾಲೆ, ಮಿಥುನ ಪಾಟೀಲ, ಸರ್ಜೇರಾವ ಪಾಟೀಲ, ಶ್ರೀಕಾಂತ ಕಣಗಲಿ, ಯೂನಸ್ ಮುಲ್ಲಾನಿ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಕಿರಣ ನಿಕಾಡೆ, ರೈತರು, ಸದಸ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು. ನಿರ್ದೇಶಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ನಿರ್ದೇಶಕ ಜಯವಂತ ಭಾಟಲೆ ವಂದಿಸಿದರು. ಅನಿಲ ಶಿಂಧೆ ನಿರೂಪಿಸಿದರು.