*ಜಯಂತಿಯ ಜೊತೆಗೆ ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕು: ಡಾ. ಅರುಣ ಜೋಳದಕೂಡ್ಲಿಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಸ್ಕೃತ ಭಾಷೆಯನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿದ್ದ ಸಮಯದಲ್ಲಿ, ಸಂಸ್ಕೃತವನ್ನು ಕೇಳಿಸಿಕೊಂಡರೆ ಕಿವಿಯಲ್ಲಿ ಸೀಸ ಹಾಕುವುದು, ಓದಿದರೆ ನಾಲಿಗೆ ಕೊಯುವ ಕಠಿಣ ಸಂದರ್ಭದಲ್ಲಿ ಸಂಸ್ಕೃತ ಕಲಿತು ಮಹಾನ್ ಕಾವ್ಯ ಬರೆದಂತಹ ಶ್ರೇಷ್ಠ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರು ಎಂದು ಕಲಬುರ್ಗಿಯ ಡಾ. ಬಿ. ಅರ್. ಅಂಬೇಡ್ಕರ ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಅರುಣ ಜೋಳದಕೂಡ್ಲಿಗಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ (ಅ.07) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
ಜಯಂತಿ ಮಾಡುವುದರಿಂದ ಸಮಾಜದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ ಎಂಬುದನ್ನು ಸಮಾಜದ ಜನ ಅವಲೋಕನ ಮಾಡಿಕೊಳ್ಳಬೇಕು. ಜಯಂತಿ ಮಾಡುವದರ ಜೊತೆಗೆ ಸಮಾಜದ ಅಭಿವೃದ್ಧಿಗಳ ಬಗ್ಗೆ ಚರ್ಚೆ ಮಾಡಬೇಕು, ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸಮುದಾಯ ಅಭಿವೃದ್ಧಿ ಯಾಗಬೇಕಾದರೆ ನಮ್ಮ ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು, ಸಮಾಜದ ಎಲ್ಲ ಜನರು ಒಗ್ಗಟ್ಟಾಗಿ
ಅಭಿವೃದ್ಧಿಯ ಸಲುವಾಗಿ ಹೋರಾಡಬೇಕು.
ನಾವು ಬಂದುತ್ವದ ನೆಲೆಯಲ್ಲಿ ಎಲ್ಲರನ್ನು ಒಗ್ಗೂಡಿಸಿ ರಾಜಕೀಯ ನೆಲೆಯನ್ನು ಕಟ್ಟ ಬಹುದಾಗಿದೆ, ವಾಲ್ಮೀಕಿ ಯುವಕ ಸಂಘಗಳನ್ನು ಅಚ್ಚುಕಟ್ಟಾಗಿ ಬೆಳೆಸಬೇಕು. ಯುವಕ ಸಂಘಗಳು ಇದ್ದೆ ಇರುತ್ತವೆ ಆದರೆ ಸಮಾಜದ ಯುವತಿಯರು ಸೇರಿಕೊಂಡು ವಾಲ್ಮೀಕಿ ಯುವತಿಯರ ಸಂಘಗಳನ್ನು ಕಟ್ಟಿ ಸಮಾಜದ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.
ಜ್ಞಾನದ ಸಂಕೇತ, ಶಿಕ್ಷಣದ ಅರಿವಿನ ಸಂಕೇತ ಮಹರ್ಷಿ ವಾಲ್ಮಿಕಿಯವರು, ಅವರಿಗೆ ಗೌರವ ಸಲ್ಲಸಬೇಕಾದರೆ ಕೇವಲ ಜಂಯಂತಿ ಮಾಡಿದರೆ ಸಾಲದು, ನಾವು ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ರೀತಿಯಲ್ಲಿ ಬೆಳೆಸಬೇಕು. ಮಹರ್ಷಿ ವಾಲ್ಮೀಕಿಯವರ ಬಗ್ಗೆ ಪ್ರತಿಯೊಬ್ಬರು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದರು.
ಮೇಲ್ಜಾತಿಗಳು ಕೆಳಜಾತಿಗಳ ಬಗ್ಗೆ ಕಟ್ಟು ಕತೆಗಳನ್ನು ಕಟ್ಟಿದ್ದಾರೆ ಅಂತಹ ಕಟ್ಟು ಕಥೆಗಳ ಬಗ್ಗೆ ಅಧ್ಯಯನ ಮಾಡಿ ನಿಜಾಂಶ ತಿಳಿಯಬೇಕು.ವಾಲ್ಮೀಕಿ ಯಾರು ನಿಜ ರಾಮಾಯಣ ಯಾವುದು ಎಂಬುದನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಇತಿಹಾಸವನ್ನು ತಿಳಿದುಕೊಂಡು ಸಮಾಜದ ಜನರನ್ನು ಜಾಗೃತಿ ಮಾಡಬೇಕು ಎಂದು ಪ್ರಾಧ್ಯಾಪಕ ಡಾ. ಅರುಣ ಜೋಳದಕೂಡ್ಲಿಗಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಮಾತನಾಡಿ ಭಾರತದ ಭವ್ಯ ಪರಂಪರೆಯಲ್ಲಿ ರಾಮಾಯಣ ಹಾಗೂ ಮಹಾಭಾರತ ವಿಶೇಷವಾದ ಸ್ಥಾನ ಪಡೆದಿವೆ, ಜೀವನದಲ್ಲಿ ಬದುಕುವ ಮೌಲ್ಯವನ್ನು ತಿಳಿಸಿಕೊಡುತ್ತವೆ, ವಾಲ್ಮೀಕಿ ಬರೆದಂತಹ ರಾಮಾಯಣ ಕೇವಲ ಕಾವ್ಯ ಅಲ್ಲಾ ಧರ್ಮ, ನಿಷ್ಠೆ, ಸತ್ಯದ ಪಾತ್ರವನ್ನು ವಹಿಸಿದಂತಹದ್ದಾಗಿದೆ.
ನಾವು ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ಪಡೆಯಬೇಕು, ಜೀವನ ಸೃಷ್ಟಿಸುವಂತಹ ಕೌಶಲ್ಯಗಳಿಗೆ ಹೆಚ್ಚು ಮಹತ್ವ ಕೊಡಬೇಕು, ಸಂಘಟಿತರಾಗಬೇಕು ಶಿಕ್ಷಣ ಪಡೆಯಬೇಕು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದರು
ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಮಾತನಾಡಿ ಇತಿಹಾಸಕಾರರು, ದಾರ್ಶನಿಕರನ್ನು ನಮಗೆ ಆದರ್ಶವಾಗಬೇಕು, ಸಮಾಜದ ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ಸಮಾಜದಲ್ಲಿ ಮೊದಲು ಧನಿಕರಿದ್ದವರು ಅಂದರೆ ಜಮೀನು ಹೊಂದಿದವರು ಆಳುತಿದ್ದರು, ನಂತರ ದುಡ್ಡು ಅಧಿಕಾರ ಇದ್ದವರು ಆಳುತ್ತಿದ್ದರು ಆದರೆ ಈಗ ಹೀಗೆ ಇಲ್ಲಾ ವಿದ್ಯೆ ಮತ್ತು ಬುದ್ಧಿಯಿಂದ ಸಮಾಜ ಆಳಬಹುದಾಗಿದೆ. ನಮ್ಮ ಮಕ್ಕಳು ಶಿಕ್ಷಣ ಪಡೆದು ಸಮಾಜ ಆಳುವ ಮತ್ತು ಸದೃಢ ಸಮಾಜ ನಿರ್ಮಾಣ ಮಾಡುವ ರೀತಿಯಲ್ಲಿ ಬೆಳೆಯಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ ಕುರಿಹುಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹರ್ಷ,
ಡಿಒಡಿಸಿ ಯೋಜನಾ ನಿರ್ದೇಶಕ ಕಲಾದಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಂಬಳೆ, ಕ್ರೀಡಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ,
ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸದಾಶಿವ ಭೀಮಗೋಳ, ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ನಿಗಮದ ಉಪಾಧ್ಯಕ್ಷ ಸುನೀಲ ಹಣಮಣ್ಣವರ, ಸಮಾಜದ ಮುಖಂಡರಾದ ರಾಜಶೇಖರ ತಳವಾರ, ಭಾವಕಣ್ಣ ಬಂಗ್ಯಾಗೋಳ, ವಾಯ್.ಹೆಚ್. ಕೋಳೆಕರ, ಸಂಜಯ ನಾಯಕ, ವಿಜಯ ತಳವಾರ, ಮಹೇಶ ಶೀಗಿಹಳ್ಳಿ, ಮಲ್ಲಿಕಾರ್ಜುನ ಹೆಗ್ಗನಾಯಕ, ಪಾಂಡುರಂಗ ನಾಯಕ, ನಾಗೇಂದ್ರ ನಾಯಕ, ಯುವರಾಜ ತಳವಾರ, ಆನಂದ ಶಿರುರ, ಸಾಗರ ದೇವನಗಿ ಹಾಗೂ ವಿವಿಧ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.
ಭವ್ಯ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಶಾಸಕರಾದ ರಾಜು(ಆಸೀಫ) ಸೇಠ ಅವರು ಮಹರ್ಷಿ ವಾಲ್ಮೀಕಿ ಅವರು ಪುತ್ಥಳುಗೆ ಪುಷ್ಪಾರ್ಚನೆ ಮಾಡುವ ಭವ್ಯ ಮೆರವಣಿಗೆಗೆ ಚಾಲನೇ ನೀಡದರು. ಮಹಾಪೌರ ಮಂಗೇಶ ಪವಾರ, ಉಪಮಹಾಪೌರರಾದ ವಾಣಿ ವಿಲಾಸ ಜೋಶಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಲಕು, ಸಾರ್ವಜನಿಕರು ಉಪಸ್ಥಿತರಿದ್ದರು.
ವಿವಿಧ ಜಾನಪದ ಕಲಾ ತಂಡ, ವಾದ್ಯಗಳೊಂದಿಗೆ
ಪ್ರಾರಂಭವಾದ ಭವ್ಯ ಮೆರವಣಿ
ನಗರದ ಅಶೋಕ ವೃತ್ತದಿಂದ ಕುಮಾರ ಗಂಧರ್ವ ರಂಗ ಮಂದಿರದ ವರೆಗೆ ಸಾಗಿತು.