Kannada NewsKarnataka NewsLatest

*ಸಂಬಂಧಿಕರ ಮನೆಯಿಂದ ಡ್ಯಾಂಗೆ ಹೋಗಿದ್ದ ಇಬ್ಬರು ಸಾವು: ನಾಲ್ವರು ಕಣ್ಮರೆ*

ಪ್ರಗತಿವಾಹಿನಿ ಸುದ್ದಿ: ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿಕೊಂಡು ಜಲಾಶಯಕ್ಕೆ ಹೋಗಿದ್ದ ಏಳು ಜನರ ಪೈಕಿ ಇಬ್ಬರು ಶವವಾಗಿ ಪತ್ತೆಯಾಗಿರುವ ಘನಘೋರ ಘಟನೆ ನಡೆದು ಹೋಗಿದೆ.

 ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಬಳಿ ಮಾರ್ಕೋನಹಳ್ಳಿ ಡ್ಯಾಂ ನೀರಿಗಿಳಿದಿದ್ದ ಒಂದೇ ಕುಟುಂಬದ 7 ಜನರಲ್ಲಿ ಈಗಾಗಲೇ ಇಬ್ಬರ ಮೃತದೇಹ ಸಿಕ್ಕಿದ್ದು, ಮತ್ತೋಬ್ಬರನ್ನು ರಕ್ಷಣೆ ಮಾಡಲಾಗಿದೆ. 

ಆದರೆ ಇನ್ನು ನಾಲ್ವರು ಏನಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸಾಜಿಯಾ, ಅರ್ಬಿನ್ ಮೃತರು. ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಬ್ (1) ಕಣ್ಮರೆಯಾದವರು. ಇನ್ನು ನವಾಜ್‌ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ತುಮಕೂರು ನಗರದ ಬಿ.ಜಿ.ಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.

ಕುಣಿಗಲ್‌ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಊಟ ಮುಗಿಸಿಕೊಂಡು ಜಲಾಶಯಕ್ಕೆ ಹೋಗಿದ್ದರು. ಹಿನ್ನೀರಿನ ಕಾಲುವೆಗೆ ಇಳಿಯುತ್ತಿದ್ದಂತೆಯೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

Home add -Advt

ಸದ್ಯ ಈ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆ ಆಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Related Articles

Back to top button