
ಪ್ರಗತಿವಾಹಿನಿ ಸುದ್ದಿ: ಊಟಕ್ಕೆ ಮನೆಗೆ ಬರುವಂತೆ ಕರೆದು ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರೊಫೇಸರ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ತಿಲಕ್ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಂಜೀವ್ ಕುಮಾರ್ ಮಂಡಲ್ ಬಂಧಿತ ಪ್ರೊಫೇಸರ್. ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಹೆಚ್ ಒಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರೊಫೇಸರ್ ನಿಂದ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಅದೇ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದಳು. ಆಕೆ ಕೂಡ ಪಶ್ಚಿಮ ಬಂಗಾಳ ಮೂಲದವಳು.
ಕಾಲೇಜಿನಲ್ಲಿ ಆಕೆಗೆ ಉಪನ್ಯಾಸಕನಾಗಿದ್ದ ಸಂಜೀವ್ ಕುಮಾರ್ ಮಂಡಲ್, ಅಕ್ಟೋಬರ್ 2ರಂದು ಮನೆಗೆ ಊಟಕ್ಕೆ ಬರುವಂತೆ ಕರೆದಿದ್ದ. ಪ್ರೊಫೇಸರ್ ಮನೆಗೆ ಊಟಕ್ಕೆ ಕರೆದಿದ್ದಾರೆ ಎಂದು ವಿದ್ಯಾರ್ಥಿನಿ ಹೋಗಿದ್ದಳು. ವಿದ್ಯಾರ್ಥಿನಿ ಪ್ರೊಫೇಸರ್ ಮನೆಗೆ ಹೋದಾಗ ಆಕೆಗೆ ಶಾಕ್ ಆಗಿದೆ. ಕಾರಣ ಅಲ್ಲಿ ಪ್ರೊಫೇಸರ್ ಒಬ್ಬನೇ ಇದ್ದ. ಕುಡಿಯಲು ನೀರು ಕೊಟ್ಟು, ನಿನ್ನ ಹಾಜರಾತಿ ಕಡಿಮೆ ಇದೆ. ಆದರೂ ಹೆಚ್ಚಿನ ಹಾಜರಾತಿ ಕೊಡುತ್ತೇನೆ. ಪರೀಕ್ಷೆಯಲ್ಲಿ ಮಾರ್ಕ್ಸ್ ಕೂಡ ಕೊಡುತ್ತೇನೆ ಎಂದು ಮಾತು ಪ್ರಾರಂಭಿಸಿದ ಪ್ರೊಫೇಸರ್ ವಿದ್ಯಾರ್ಥಿನಿಯ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ತಪ್ಪಿಸಿಕೊಂಡು ಬಂದ ವಿದ್ಯಾರ್ಥಿನಿ ಮನೆಯಲ್ಲಿ ವಿಷಯ ಹೇಳಿದ್ದಳು.
ಮನೆಯವರ ಸಲಹೆಯಂತೆ ತಿಲಕ್ ನಗರ ಠಾಣೆಗೆ ತೆರಳಿ ಪ್ರೊಫೇಸರ್ ಸಂಜೀವ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಳು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈಗ ಪ್ರೊಫೇಸರ್ ನನ್ನು ಬಂಧಿಸಿದ್ದಾರೆ.