*ನನ್ನದು ಸ್ವಾರ್ಥರಹಿತ ರಾಜಕಾರಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಸಾಂಬ್ರಾ ಗ್ರಾಮದ ಶ್ರೀ ಕರೆವ್ವದೇವಿ ದೇವಸ್ಥಾನದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ
ಪ್ರಗತಿವಾಹಿನಿ ಸುದ್ದಿ: ಅಭಿವೃದ್ಧಿ ವಿಷಯದಲ್ಲಿ ಎಂದೂ ರಾಜಕಾರಣ ಮಾಡಿಲ್ಲ. ಕ್ಷೇತ್ರದಲ್ಲಿ ಸ್ವಾರ್ಥ ರಹಿತವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಾಂಬ್ರಾ ಗ್ರಾಮದ ಮಾರುತಿ ಗಲ್ಲಿಯ ಶ್ರೀ ಕರೆವ್ವದೇವಿ ದೇವಸ್ಥಾನದ ನೂತನ ಕಟ್ಟಡದ ವಾಸ್ತುಶಾಂತಿ, ಕಳಸಾರೋಹಣ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಚುನಾವಣೆಯಲ್ಲಿ ಯಾರು ಮತ ಹಾಕಿದ್ದಾರೆ, ಯಾರು ಮತ ಹಾಕಿಲ್ಲ ಎಂಬುದನ್ನು ನೋಡದೇ, ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ಕ್ಷೇತ್ರದಲ್ಲಿ ದೇವಾಲಯಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೀಡಿದ್ದೇನೆ, ಇದುವರೆಗೂ 140 ದೇವಸ್ಥಾನಗಳ ಜೀರ್ಣೋದ್ದಾರ ಮಾಡಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಜಾತಿ, ಭಾಷೆ ರಾಜಕಾರಣ ಮಾಡಿಲ್ಲ, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮುಂದಿರುವ ಗುರಿ. ಕ್ಷೇತ್ರದ ಜನರಿಗೆ ಸಾರಿಗೆ ವ್ಯವಸ್ಥೆ, ರಸ್ತೆ, ನೀರು, ರಕ್ಷಣೆಗಾಗಿ ಪೊಲೀಸ್ ನೆರವು ಸೇರಿದಂತೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇನೆ ಎಂದು ಸಚಿವರು ಹೇಳಿದರು.
ವಿಶ್ವಕರ್ಮ ಸಮಾಜ ಸಣ್ಣ ಸಮಾಜವಾದರೂ ಹೃದಯ ದೊಡ್ಡದು, ಬಹಳ ಗೌರವ ಇದೆ. ಕೇವಲ ದೇವರ ಹೆಸರು ಹೇಳುವುದಿಲ್ಲ, ದೇವರ ಕೆಲಸ ಮಾಡಿ ತೋರಿಸುತ್ತಿದ್ದೇನೆ. ಯಾರು ಕೆಲಸ ಮಾಡುತ್ತಾರೆ, ಯಾರು ಕೇವಲ ಭಾಷಣ ಮಾಡುತ್ತಾರೆ ಎಂಬುದು ನಿಮಗೆ ಅರ್ಥ ವಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸುಮಾರು ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ಈ ಹೊಸ ಮಂದಿರವು ಆಧ್ಯಾತ್ಮಿಕ ತಾಣವಾಗಲಿದೆ ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಂತಾರಾಮ ಲೋಹಾರ್, ಈರಪ್ಪ ಸುಳೇಭಾವಿ, ನಾಗೇಶ್ ದೇಸಾಯಿ, ರಚನಾ ಗಾವಡೆ, ಕಾಶೀನಾಥ್ ಧರ್ಮೋಜಿ, ಸದು ಪಾಟೀಲ, ಕಲ್ಲವ್ವ ಕವೇಗಾರ್, ದೇವಕಿ ಶೋಗಣಿ, ಸಪನಾ ತಳವಾರ್, ಸುಲೋಚನಾ ಜೋಗಾಣಿ, ಭುಜಂಗ ಗಿರಮಲ್, ಸಂಜು ಕಾಂಬಳೆ ಹಾಗೂ ಭರ್ಮಾ ಚಿಂಗಳೆ ಮೊದಲಾದವರು ಉಪಸ್ಥಿತರಿದ್ದರು.