
ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧಕ್ಕೆ 48 ಗಂಟೆಗಳ ಕದನ ವಿರಾಮವನ್ನು ಘೋಷಿಸಲಾಗಿದೆ.
ಗಡಿ ಘರ್ಷಣೆಗಳು ಎರಡೂ ಕಡೆಗಳಲ್ಲಿ ಸಾಕಷ್ಟು ಜೀವಗಳನ್ನು ಬಲಿ ಪಡೆದ ನಂತರ ಕದನ ವಿರಾಮ ಘೋಷಣೆ ಮಾಡಲಾಗಿದೆ.
ಎರಡೂ ದೇಶಗಳ ಪರಸ್ಪರ ಒಪ್ಪಿಗೆಯೊಂದಿಗೆ ಪಾಕಿಸ್ತಾನ ಸರ್ಕಾರ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ನಡುವೆ ತಾತ್ಕಾಲಿಕ ಕದನ ವಿರಾಮವನ್ನು ನಿರ್ಧರಿಸಲಾಗಿದೆ.
ಆದರೆ, ಅಫ್ಘಾನ್ ಸರ್ಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪಾಕಿಸ್ತಾನ ಸಶಸ್ತ್ರ ಪಡೆಗಳು ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಕದನ ವಿರಾಮ ಘೋಷಿಸಲಾಯಿತು.
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಸಮೀಪವಿರುವ ಸ್ಪಿನ್ ಬೋಲ್ಡಕ್ ಜಿಲ್ಲೆಯ ವಸತಿ ಪ್ರದೇಶಗಳ ಮೇಲೆ ಈ ದಾಳಿಗಳು ನಡೆದಿದ್ದು, 15 ನಾಗರಿಕರು ಸಾವನ್ನಪ್ಪಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.