
ಪ್ರಗತಿವಾಹಿನಿ ಸುದ್ದಿ : ಫುಡ್ ಡೆಲಿವರಿ ಮಾಡುವ ಡೆಲಿವರಿ ಬಾಯ್ ಗಳನ್ನೇ ಟಾರ್ಗೆಟ್ ಮಾಡಿ ಮೊಬೈಲ್ ದರೋಡೆ ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಅಂದರ್ ಆಗಿದೆ.
ನೇಪಾಳಿ ಮೂಲದ ನಾಲ್ವರು ಆರೋಪಿಗಳನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9 ಮೊಬೈಲ್ ಹಾಗೂ 3 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಸುರೇಶ್ (22) ಎಂಬ ಡೆಲಿವರಿ ಬಾಯ್ ಈ ಸಂಬಂಧ ದೂರು ನೀಡಿದ್ದರು. ಹೀಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ನೇಪಾಳ ಮೂಲದ ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20), ಸಮೀರ್ ಲೋಹಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಖಾಸಗಿ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಈ ಗ್ಯಾಂಗ್ ರಾತ್ರಿ ವೇಳೆ ದರೋಡೆಗಿಳಿಯುತ್ತಿದ್ದರು.
ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್‌ಗಳ ಬೈಕ್ ಅಡ್ಡ ಹಾಕುತ್ತಿದ್ದ ಈ ಗ್ಯಾಂಗ್, ಬಳಿಕ ಹಲ್ಲೆ ನಡೆಸಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು.
ಇದೇ ರೀತಿ ಕಳೆದ ತಿಂಗಳು ಕಸವನಹಳ್ಳಿ ರಸ್ತೆಯಲ್ಲಿ ಸುರೇಶ್ ಅವರ ಬೈಕ್ ಅನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಈ ಗ್ಯಾಂಗ್ ಪರಾರಿಯಾಗಿತ್ತು. ಈ ಸಂಬಂಧ ಸುರೇಶ್ ದೂರು ನೀಡಿದ್ದರು.