
ಪ್ರಗತಿವಾಹಿನಿ ಸುದ್ದಿ : ಛತ್ತೀಸ್‌ಗಢದಲ್ಲಿ ನಡೆದ ರೈಲುಗಳ ಮುಖಾಮುಖಿ ಡಿಕ್ಕಿಯಲ್ಲಿ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿದೆ.
ಬಿಲಾಸ್‌ಪುರ-ಕಟ್ಟಿ ವಿಭಾಗದಲ್ಲಿ ಕೊರ್ಬಾ ಪ್ರಯಾಣಿಕ ರೈಲು ಲಾಲ್ ಖಾದನ್ ಪ್ರದೇಶದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು. ಡಿಕ್ಕಿಯ ತೀವ್ರತೆಗೆ ಬೋಗಿಗಳು ಒಂದರ ಮೇಲೆ ಹೋಗಿ ಬಿದ್ದು ಅವಘಡ ನಡೆದಿತ್ತು. ಸ್ಥಳದಲ್ಲಿಯೇ 6 ಮಂದಿ ಮೃತಪಟ್ಟಿರೋದು ಅಧಿಕೃತವಾಗಿತ್ತು. ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿದೆ.
ಇನ್ನು 12ಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವು ಗಾಯಾಳುಗಳ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ರೈಲ್ವೆ ಇಲಾಖೆ ಮೃತಪಟ್ಟ ಕುಟುಂಬಗಳಿಗೆ 10 ಲಕ್ಷ ಪರಿಹಾರ ಘೋಷಿಸಿದೆ. ಹಾಗೆಯೇ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 5 ಲಕ್ಷ ಹಾಗೆ ಸಣ್ಣ ಪ್ರಮಾಣದ ಗಾಯಗಳಾದ ಮಂದಿಗೆ 1 ಲಕ್ಷ ಪರಿಹಾರ ನೀಡಲಾಗಿದೆ.
ರೈಲ್ವೆ ರಕ್ಷಣಾ ತಂಡಗಳು, ಆರ್‌ಪಿಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಾರ್ಗದಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.



