
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನ.7ರ ಮೊದಲು ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಬೆಳಗಾವಿ ಬಂದ್ ಮಾಡಲಾಗುವುದು ಎಂದು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ಎಚ್ಚರಿಕೆ ನೀಡಿದರು.
ಬುಧವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ನಡೆಸುತ್ತಿರುವ ಹೋರಾಟ ಏಳು ದಿನಗಳ ಕಾಲ ನಡೆದರೂ ಸರಕಾರ ಅವರ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ದೂರಿದರು.
ರಾಜ್ಯ ಸರಕಾರ ಕಬ್ಬಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಬಗೆ ಹರಿಸುವುದಾಗಿ ಹೇಳುತ್ತಾರೆ. ಹಾಗಾದರೆ ನಿಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.
ನ.7 ರಂದು ಬೆಳಗಾವಿ ಬಂದ್ ಮಾಡಿ ರೈತರಿಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಸರಕಾರ ತತಕ್ಷಣ ಎಚ್ಚೆತ್ತಕೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಾರೆ ಜಿಲ್ಲಾಡಳಿತಕ್ಕೆ ಹೇಳಿದ್ದೇವೆ ಎಂದು. ಹಾಗಾದರೆ ನೀವು ಯಾಕೆ ಮಂತ್ರಿ ಇದ್ದೀರಿ? ಪ್ರತಿಯೊಂದನ್ನು ಜಿಲ್ಲಾಡಳಿತ ಮಾಡುವುದಿದ್ದರೆ ನೀವು ಯಾಕೆ ಜಿಲ್ಲಾ ಉಸ್ತವಾರಿ ಸಚಿವರಿದ್ದೀರಿ? ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಂದರೆ ಇಡೀ ಜಿಲ್ಲೆಗೆ ಸಂಬಂಧಪಟ್ಟವರು ಎಂದು ಆಕ್ರೋಶ ಹೊರ ಹಾಕಿದರು.


