*ಬೆಳಗಾವಿ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಸರ್ಕಾರ ನೀಡುವ ದರಕ್ಕಿಂತ ಹೆಚ್ಚಿನ ದರ ನೀಡುವುದಾಗಿ ಘೋಷಿಸಿದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ*

ಪ್ರಗತಿವಾಹಿನಿ ಸುದ್ದಿ: ಕಬ್ಬಿಗೆ 3500 ರೂಪಾಯಿ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಸಂಪೂರ್ಣವಾಗಿ ನಿಂತಿಲ್ಲ. ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ನೀಡುವುದಾಗಿ ಆದೇಶ ಪತ್ರ ಹೊರಡಿದರೂ ಕೆಲವೆಡೆ ರೈತರು 3500 ರೂಪಾಯಿ ನೀಡುವಂತೆ ಪಟ್ತು ಹಿಡಿದಿದ್ದಾರೆ.
ಈ ನಡುವೆ ಬೆಳಗಾವಿಯ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಲೆಗಿಂದ ಹೆಚ್ಚಿನ ದರ ನೀಡುವುದಾಗಿ ಘೋಷಣೆ ಮಾಡಿದೆ. ಪ್ರತಿ ಟನ್ ಕಬ್ಬಿಗೆ 3350 ರೂಪಾಯಿ ನೀಡುವುದಾಗಿ ತಿಳಿಸಿದೆ.
ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸ್ವರೂಪ್ ಮಹಾದೇವರಾವ್ ಮಾಹಾಡಿಕ್ ಎಂಬುವವರ ಒಡೆತನದಲ್ಲಿದ್ದು, ಒಂದು ಟನ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿ ಮಾಡಿದ ಬೆಲೆಗಿಂತಲೂ ಹೆಚ್ಚು ದರ ಅಂದರೆ ಸರ್ಕಾರ ಟನ್ ಕಬ್ಬಿಗೆ 3300 ರೂಪಾಯಿ ನೀಡಲು ನಿರ್ಧರಿಸಿದೆ. ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಇನ್ನೂ 50ರೂಪಾಯಿ ಹೆಚ್ಚಿಸಿ 3350 ರೂಪಾಯಿ ನೀಡುವುದಾಗಿ ತಿಳಿಸಿದೆ.




