*ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಅಥಣಿ ಸಿಪಿಐ: ಲೋಕಾಯುಕ್ತದಲ್ಲಿ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ಸಿಪಿಐ ಅವರದ್ದೆ ಎನ್ನಲಾದ ಒಂದು ಆಡಿಯೋ ವೈರಲ್ ಆಗಿದ್ದು, ಸಿಪಿಐ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿದ್ದು, ಅಥಣಿ ಠಾಣೆಯ ಸಿಪಿಐ ಸಂತೋಷ್ ಹಳ್ಳೂರ್ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮೀರಸಾಬ್ ಮುಜಾವರ್ ಎನ್ನುವವರು ಸಿಪಿಐ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ಮೀರಸಾಬ್ ಮುಜಾವರ್ ಅವರು ಅನುಪಕುಮಾರ್ ನಾಯರ್ ಎನ್ನುವವರಿಗೆ ಎರಡು ಸೈಟ್ ಕೊಡಿಸುವ ನೆಪದಲ್ಲಿ 20 ಲಕ್ಷ ರೂಪಾಯಿ ಹಣವನ್ನ ಕೊಟ್ಟಿದ್ದರು. ಆದರೆ ಸೈಟ್ ಮಾತ್ರ ಕೊಟ್ಟಿರಲಿಲ್ಲ. ಹಾಗಾಗಿ ಸೈಟ್ ನೀಡದ ಹಿನ್ನೆಲೆಯಲ್ಲಿ ಹಣ ವಾಪಾಸ್ ಕೊಡಿಸುವಂತೆ ಪೊಲೀಸ್ ಠಾಣೆಗೆ ಸಹಾಯ ಕೇಳಿ ಹೋಗಿದ್ದಾರೆ. ಈ ಸಮಯದಲ್ಲಿ ಸಿಪಿಐ ಹಳ್ಳೂರ ಅವರು ಒಂದು ಲಕ್ಷ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಈ ವಿಚಾರವಾಗಿ ಮೀರಸಾಬ್ ಮತ್ತು ಸಿಪಿಐ ನಡುವೆ ಹಣದ ವಿಚಾರವಾಗಿ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೋ ದಾಖಲೆಯನ್ನು ಲೋಕಾಯುಕ್ತ ಅಧಿಕಾರಿಗಳಿಗೆ ನೀಡಲಾಗಿದೆ. ಅದರ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
ಸದ್ಯ ಅಥಣಿ ಠಾಣೆ ಹಾಗೂ ಸಿಪಿಐ ಹಳ್ಳೂರ್ ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಮಾಡಿದ್ದು, ದಾಳಿ ಮಾಹಿತಿ ಸಿಕ್ಕ ಕಾರಣದಿಂದ ಸಿಪಿಐ ತಕ್ಷಣವೇ ಪರಾರಿಯಾಗಿದ್ದಾರೆ ಎನ್ನಲಾಗಿದೆ.


