Karnataka NewsLatestPolitics

*ಬಿಹಾರ ಚುನಾವಣಾ ಫಲಿತಾಂಶ: ಪ್ರಧಾನಿ ಮೋದಿ ನಾಯಕತ್ವ ಮುಂದುವರೆಯಲು ಜನತೆಯ ಸಂದೇಶ: ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮುಂದುವರಿಯುವ ಸಂದೇಶವನ್ನು ಬಿಹಾರದ ಜನತೆ ನೀಡಿದ್ದಾರೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೂ ಇದೇ ಗತಿ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಪರವಾಗಿ ಬಿಹಾರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮುಂದುವರಿಯಬೇಕು ಹಾಗೂ ಬಿಹಾರಕ್ಕೆ ರೌಡಿಗಳ ಆಡಳಿತ ಬೇಡ ಎಂದು ಮತದಾರರು ಸಂದೇಶ ನೀಡಿದ್ದಾರೆ. ಲಾಲೂ ಪ್ರಸಾದ್‌ ಯಾದವ್‌ ಕುಟುಂಬ ಸರ್ಕಾರದ ಹಣವನ್ನು ಲೂಟಿ ಮಾಡಿ ಗನ್‌ ಮೂಲಕ ಆಡಳಿತ ನಡೆಸಿತ್ತು. ಅದಕ್ಕಾಗಿ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು ಓಲೈಕೆ ಮಾಡಿ ಜನರಿಗೆ ಟೋಪಿ ಹಾಕಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಿತಿಯೂ ಮಹಾಘಟಬಂಧನ್‌ನಂತೆಯೇ ಆಗಲಿದೆ. ರಾಹುಲ್‌ ಗಾಂಧಿ ಐರನ್‌ ಲೆಗ್‌ ಆಗಿದ್ದು, ಎಲ್ಲ ಚುನಾವಣೆಗಳನ್ನು ಸೋತಿದ್ದಾರೆ. ಅವರು ಸೋಲನ್ನು ಎದುರಿಸಲಾಗದೆ ವಿದೇಶಕ್ಕೆ ಓಡಲಿದ್ದಾರೆ. ಈ ಚುನಾವಣಾ ಫಲಿತಾಂಶದಿಂದ ಕೇಂದ್ರ ಸರ್ಕಾರ ಇನ್ನಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಕಾಂಗ್ರೆಸ್‌ನವರು ಮತಗಳ್ಳತನ, ಇವಿಎಂ ಸರಿ ಇಲ್ಲ ಎಂದು ಹೇಳಿದ್ದನ್ನೇ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್‌ನ ಕೂಸು. ಆಗ ಸರಿ ಇದ್ದ ಯಂತ್ರಗಳು ಈಗ ಸರಿ ಇಲ್ಲ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅತ್ಯಧಿಕ ಬಹುಮತ ಪಡೆದು ಗೆದ್ದಾಗ ಮತಗಳ್ಳತನ ನಡೆದಿಲ್ಲ. ಈಗ ಮಾತ್ರ ಮತಗಳ್ಳತನ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.

Home add -Advt

ಈ ಫಲಿತಾಂಶ ಸಿದ್ದರಾಮಯ್ಯನವರ ಪಾಲಿಗೆ ಹಬ್ಬವಾಗಿದೆ. ಏಕೆಂದರೆ ಇನ್ನು ಸಿಎಂ ಸಿದ್ದರಾಮಯ್ಯ ರಾಹುಲ್‌ ಗಾಂಧಿಯನ್ನೇ ಆಟವಾಡಿಸುತ್ತಾರೆ. ಡಿ.ಕೆ.ಶಿವಕುಮಾರ್‌ ಹೇಳಿದ್ದೆಲ್ಲವೂ ಸುಳ್ಳಾಗಿದೆ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ರೈತರ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಜೈಲಿನಲ್ಲಿ ಕೈದಿಗಳ ಕೈಗೆ ಮೊಬೈಲ್‌ ಸಿಗುತ್ತಿದೆ. ಎಲ್ಲ ತೆರಿಗೆಗಳು ಏರಿಕೆಯಾಗಿದೆ. ಆದ್ದರಿಂದ ಈ ಸರ್ಕಾರವನ್ನು ಜನರು ತಿರಸ್ಕರಿಸುತ್ತಾರೆ ಎಂದರು.

Related Articles

Back to top button