
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಎರಡು ದಿನಗಳ ಹಿಂದೆ 29 ಕೃಷ್ಣಮೃಗಗಳು ಮೃತಪಟ್ಟಿದ್ದು, ರವಿವಾರ ಮತ್ತೆರಡು ಮೃತಪಟ್ಟಿವೆ. ಈ ಮೂಲಕ ಕೃಷ್ಣಮೃಗಗಳ ಸಾವಿನ ಸಂಖ್ಯೆ 31ಕ್ಕೆ ಏರಿಕೆ ಆಗಿದೆ.
ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಗಳಿದ್ದವು. ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯ ಸೇರಿ ವಿವಿಧ ಕಡೆಗಳಿಂದ ಅವುಗಳನ್ನು ತರಲಾಗಿತ್ತು. ಅವು ನಾಲ್ಕರಿಂದ ಆರು ವರ್ಷ ವಯಸ್ಸಿನವು. ಸದ್ಯ, 7 ಕೃಷ್ಣಮೃಗಗಳಿವೆ. ಒಂದರ ಹಿಂದೊಂದು ನಿತ್ರಾಣಗೊಂಡು, ಅವು ದಯನೀಯ ಸ್ಥಿತಿಯಲ್ಲಿ ಕುಸಿದು ಬೀಳುತ್ತಿರುವುದು ಮನಕಲಕುವಂತಿತ್ತು.
‘ಸಾವಿಗೆ ಬ್ಯಾಕ್ಟಿರಿಯಾ ಸೋಂಕು ಕಾರಣವಾಗಿರಬಹುದು. ಗುರುವಾರ ಸಾವನ್ನಪ್ಪಿದ್ದ ಎಂಟು ಕೃಷ್ಣಮೃಗಗಳ ಒಳ ಅಂಗಾಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ಬನ್ನೇರುಘಟ್ಟ ಮತ್ತು ಮೈಸೂರಿಗೆ ಕಳುಹಿಸಲಾಗಿದೆ.
‘ರಾಜ್ಯದ ಯಾವುದೇ ಮೃಗಾಲಯದಲ್ಲಿ ಇಂಥ ಪ್ರಕರಣ ಕಂಡುಬಂದಿಲ್ಲ. ನಮ್ಮಲ್ಲೂ ಇದೇ ಮೊದಲ ಬಾರಿ ಇಂಥ ಪ್ರಕರಣ ವರದಿ ಆಗಿದೆ. ಸೋಂಕು ತಡೆಗೆ ಇತರೆ ಪ್ರಾಣಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಕೃಷ್ಣಮೃಗಗಳು ಇರುವ ಆವರಣವನ್ನು ಮುಚ್ಚಲಾಗಿದೆ. ಅಲ್ಲದೇ, ಕಿರು ಮೃಗಾಲಯದ ಪರಿಸರದಲ್ಲಿ ಸೋಂಕು ನಿವಾರಕ ಸಿಂಪಡಿಸಿಲಾಗುತ್ತಿದೆ.
‘ಮೃಗಾಲಯದ ಬೇರೆ ಪ್ರಾಣಿಗಳ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಆದರೂ, ಮುನ್ನೆಚ್ಚರಿಕೆ ದೃಷ್ಟಿಯಿಂದ ಎಲ್ಲ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಮತ್ತೊಂದೆಡೆ ಬೆಂಗಳೂರಿನ ಬನ್ನೇರುಘಟ್ಟ ಪಶು ವಿಜ್ಞಾನ ವಿದ್ಯಾಲಯದ ತಜ್ಞ ವೈದ್ಯರು ಮೃಗಾಲಯಕ್ಕೆ ಭೇಟಿ ನೀಡಿ ಮೃತ ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿ ಬಂದ ಬಳಿಕ ಕೃಷ್ಣಮೃಗಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.



