
ಪ್ರಗತಿವಾಹಿನಿ ಸುದ್ದಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಬೆಳೆಹಾನಿ, ಕಬ್ಬು ಬೆಳೆಗಾರರ ಸಮಸ್ಯೆ, ಮಹದಾಯಿ, ಮೇಕೆದಾಟು ಯೋಜನೆ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿದರು. ಈ ವೇಳೆ ಸಚಿವ ಕೃಷ್ಣಬೈರೇಗೌಡ ಕೂಡ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಟ್ಟು ಐದು ವಿಷಯಗಳ ಬಗ್ಗೆ ಪ್ರಧಾನಿ ಅವರ ಬಳಿ ಚರ್ಚಿಸಿದ್ದಾಗಿ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 14,58,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳೆಹಾನಿ ಬಗ್ಗೆ ನಾವು ಜಂಟಿ ಸಮಿಕ್ಷೆ ನಡೆಸಿದ್ದೇವೆ. ರಾಜ್ಯದಲ್ಲಿ 3560 ಕೋಟಿ ನಷ್ಟವಾಗಿದೆ. ಮಳೆಯಿಂದಾಗಿ ಮೂಲಸೌಕರ್ಯಗಳಿಗೂ ಹಾನಿಯಾಗಿದೆ ಎಂದು ಪ್ರಧಾನಿಯವರಿಗೆ ಮನವರಿಕೆ ಮಾಡಿದ್ದಾಗಿ ತಿಳಿಸಿದರು.



