
ಪ್ರಗತಿವಾಹಿನಿ ಸುದ್ದಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ಬೆಳಗ್ಗೆ ಅಲ್ ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿದೆ.
ದೆಹಲಿ ಸ್ಫೋಟ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆದಿದೆ ಎಂಬುದನ್ನು ಬಹಿರಂಗಪಡಿಸಿದೆ. ಹಾಗಾಗಿ ಇಡಿ ದೆಹಲಿ ಮತ್ತು ಫರಿದಾಬಾದ್ನಲ್ಲಿ ವಿಶ್ವವಿದ್ಯಾಲಯದ ಪ್ರಧಾನ ಕಛೇರಿ ಸೇರಿದಂತೆ 25 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ಇದರಿಂದಾಗಿ ಇಡಿ ಅಲ್ಲಿನ ದಾಖಲೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವ್ಯಾಪಕವಾಗಿ ಪರಿಶೀಲಿಸಲು ಮುಂದಾಗಿದೆ. ದೆಹಲಿ ಮತ್ತು ಫರಿದಾಬಾದ್ನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ಓಗ್ಲಾದಲ್ಲಿರುವ ವಿಶ್ವವಿದ್ಯಾಲಯದ ಆವರಣವನ್ನೂ ಸೇರಿಸಲಾಗಿದೆ. ದೆಹಲಿ ಸ್ಫೋಟಗಳ ತನಿಖೆ ನಡೆಸುತ್ತಿರುವ ಎನ್ಐಎ ವರದಿಯ ಆಧಾರದ ಮೇಲೆ ಇಡಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿ, ನಂತರ ಈ ದಾಳಿಗಳನ್ನು ನಡೆಸಿದೆ.
ವಿಶ್ವವಿದ್ಯಾನಿಲಯದ ಆಡಳಿತಾತ್ಮಕ ಕಾರ್ಯಾಚರಣೆಗಳಲ್ಲಿ ಗಂಭೀರ ಆರ್ಥಿಕ ಅಕ್ರಮಗಳು ಮತ್ತು ಅನುಮಾನಾಸ್ಪದ ವಹಿವಾಟುಗಳ ಪುರಾವೆಗಳನ್ನು ತನಿಖಾ ಸಂಸ್ಥೆಗಳು ಕಂಡುಕೊಂಡಿವೆ. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಡಾ. ಉಮರ್ ಉನ್ ನಬಿ, ಡಾ. ಮುಜಮ್ಮಿಲ್ ಶಕೀಲ್, ಡಾ. ಶಾಹೀನ್ ಮತ್ತು ಡಾ. ಆದಿಲ್ ಅಹ್ಮದ್ ಕೂಡ ಈ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದಾರೆಂದು ನಂಬಲಾಗಿದೆ.
10 ದಾಳಿಯ ಸಮಯದಲ್ಲಿ ಅಧಿಕಾರಿಗಳು ಎಲ್ಲಾ ಹಣಕಾಸಿನ ದಾಖಲೆಗಳು, ಭೂ ಖರೀದಿ ದಾಖಲೆಗಳು, ಹಣಕಾಸಿನ ಮೂಲಗಳು ಮತ್ತು ಟ್ರಸ್ಟಿಗಳ ಹಣಕಾಸಿನ ವಹಿವಾಟುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿವೆ.



