*ತಾಲೂಕು ಹಂತದ ಪ್ರತಿಭಾನ್ವೇಷಣೆ ಪರೀಕ್ಷೆ-2025*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದ ಪ್ರತಿಭಾನ್ವಿತ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪರಿಚಯಿಸಲು ಮತ್ತು ವೇದಿಕೆಯನ್ನು ಕಲ್ಪಿಸಲು ಪ್ರತಿಭಾನ್ವೇಷಣೆ (ಟ್ಯಾಲೆಂಟ್ ಸರ್ಚ) ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಳಗಾವಿ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಬೆಳಗಾವಿಯ ಸಮಸ್ತ ಜಿಲ್ಲೆಯ 5 ಶೈಕ್ಷಣಿಕ ವಲಯಗಳ ಸರ್ಕಾರ ಪ್ರೌಢ ಶಾಲೆ ಹಾಗೂ ಸರ್ಕಾರಿ ವಸತಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 09 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ, ತಾಲೂಕಾ ಮತ್ತು ಜಿಲ್ಲಾ 3 ಹಂತಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸಲಾಗಿದ್ದು ನವೆಂಬರ್ 06, 2025 ರಂದು ಶಾಲಾ ಹಂತದ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ 15 ಶೈಕ್ಷಣಿಕ ವಲಯಗಳಿಂದ 09ನೇ ತರಗತಿಗೆ 27,280 ಮಕ್ಕಳು ಹಾಗೂ 10ನೇ ತರಗತಿಗೆ 25,716 ಮಕ್ಕಳು ಒಟ್ಟು 52,996 ಮಕ್ಕಳು ಹಾಜರಾಗಿದ್ದು, ಈ ಮಕ್ಕಳಲ್ಲಿ ಪ್ರತಿ ಶಾಲೆಯಿಂದ ಮೊದಲ 10 ಸ್ಥಾನ ಪಡೆದ ಮಕ್ಕಳನ್ನು ತಾಲೂಕಾ ಹಂತ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ತಾಲೂಕಾ ಹಂತದಲ್ಲಿ ಪ್ರತಿ ತಾಲೂಕಿನಿಂದ ಮೊದಲ 50 ಸ್ಥಾನ ಪಡಯುವ ವಿದ್ಯಾರ್ಥಿಗಳಿಗೆ ಜಿಲ್ಲಾ ಹಂತದ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ನವೆಂಬರ್ 28, 2025 ರಂದು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ 1500 ರಿಂದ 1600 ಮಕ್ಕಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಹಂತದಿAದ ಆಯ್ಕೆಯಾಗುವ 100 ಮಕ್ಕಳಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಳ ಆಧೀವೇಶನ ಸಂದರ್ಭದಲ್ಲಿ ಗಣ್ಯರಿಂದ ಸನ್ಮಾನ ಮಾಡಲಾಗುವುದು ಹಾಗೂ ತರಗತಿವಾರು ಮೊದಲ ಮೂರು ಸ್ಥಾನ ಪಡೆಯುವ ಮಕ್ಕಳಿಗೆ ಕ್ರಮವಾಗಿ 25000/-, 15000/-, ಮತ್ತು 10000/-ರೂ. ನಗದು ಬಹುಮಾನ ನೀಡುತ್ತಿರುವುದು ಈ ವರ್ಷದ ಪ್ರತಿಭಾನ್ವೇಷಣೆ ಪರೀಕ್ಷೆಯ ವಿಶೇಷತೆ ಆಗಿರುತ್ತದೆ.




